ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಬೆಳಗ್ಗೆ 11.30ಕ್ಕೆ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಪಿಯುಸಿ ಪರೀಕ್ಷಾ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಹಿತಿ ನೀಡಿದ ಸಚಿವರು, ಮಾರ್ಚ್ 4 ರಿಂದ 21 ರವರೆಗೆ ಪಿಯುಸಿ ವಿವಿಧ ವಿಷಯಗಳ ಪರೀಕ್ಷೆಗಳು ನಡೆಸಿದ್ದು, ಕೋವಿಡ್-19 ಲಾಕ್ ಡೌನ್ ಸಡಿಲಿಕೆ ಬಳಿಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಜೂ. 18ರಂದು ಆಂಗ್ಲಭಾಷೆ ಯ ಪರೀಕ್ಷೆ ನಡೆಸಲಾಗಿತ್ತು. ಈಗ ಪರೀಕ್ಷಾ ಮೌಲ್ಯಮಾಪನ ಮುಗಿದಿದ್ದು ಸುಮಾರು 6.75 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಾಳೆ ಹೊರಬೀಳಲಿದೆ ಎಂದು ತಿಳಿಸಿದರು.
ನಾಳೆ ಅಧಿಕೃತ ಫಲಿತಾಂಶ ಪ್ರಕಟಣೆಯ ಬಳಿಕ ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಸಂದೇಶ ರವಾನೆಯಾಗುವುದು. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನಾಳೆ ಮಧ್ಯಾಹ್ನ 12 ಗಂಟೆಯ ಬಳಿಕ ಸರ್ಕಾರದ ಅಧಿಕೃತ ಜಾಲತಾಣ www.karresults.nic.in ಗಳಲ್ಲಿಯೂ ಸಹ ವೀಕ್ಷಿಸಬಹುದೆಂದು ತಿಳಿಸಿದ್ದಾರೆ.
ಈ ಮಧ್ಯೆ ಸಿಇಟಿ ಪರೀಕ್ಷೆಗಳು ಈ ಹಿಂದೆ ನಿಗದಿಯಾಗಿರುವಂತೆಯೇ ಇದೇ ತಿಂಗಳ ಅಂತ್ಯಕ್ಕೆ ಅಂದರೆ 30, 31ರಂದು ನಡೆಯಲಿವೆ ಎಂದು ಸರಕಾರ ಸ್ಪಷ್ಟಪಡಿಸಿದೆ.
ಲಾಕ್‌ಡೌನ್ ಕಾರಣ ಮುಂದುಡಿಕೆಯಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸಹ ಈಗ ಮುಕ್ತಾಯವಾಗಿದ್ದು ಇಂದಿನಿಂದ ಉತ್ತರ ಪತ್ರಿಕೆ ಮೌಲ್ಯಮಾಪನ ಪ್ರಕ್ರಿಯೆ -ಬೆಂಗಳೂರು ಮತ್ತು ಗ್ರಾಮಾಂತರ ಜಿಲ್ಲೆಗಳ ಹೊರತುಪಡಿಸಿ ರಾಜ್ಯಾದ್ಯಂತ ಆರಂಭವಾಗಿದೆ.