NEWSನಮ್ಮರಾಜ್ಯರಾಜಕೀಯ

ಡಿಸಿಎಂ ಅಶ್ವತ್ಥ ನಾರಾಯಣ ರಾಜೀನಾಮೆಗೆ ಎಎಪಿ ಆಗ್ರಹ

ಕೊರೊನಾ ವೈದ್ಯಕೀಯ ಉಪಕರಣಗಳು, ಸುವಿಧಾ ಕ್ಯಾಬಿನ್ ಖರೀದಿ ಹಗರಣ ಆರೋಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ನೆಪ ಮಾಡಿಕೊಂಡು ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದಂತ ಭ್ರಷ್ಟಾಚಾರ ನಡೆದಿದೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ನಾಯಕರು ಆರೋಪಿಸಿದ್ದು, ಈ ಹಗರಣದ ಹೊಣೆ ಹೊತ್ತು ಡಿಸಿಎಂ ಅಶ್ವತ್ಥ ನಾರಾಯಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸ್ವತಃ ವೈದ್ಯರಾಗಿರುವ, ಅಲ್ಲದೇ ಅನೇಕ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಅಶ್ವಥ್ ನಾರಾಯಣ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ 2 ಸಾವಿರ ಕೋಟಿ ರೂ.ನಷ್ಟು ಭ್ರಷ್ಟಾಚಾರ ನಡೆಯಲು ಹೇಗೆ ಅನುವು ಮಾಡಿಕೊಟ್ಟರು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ‌ ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಕಿಡಿಕಾರಿದ್ದಾರೆ.

ಸ್ವತಃ ವೈದ್ಯರಾಗಿರುವ ಅಶ್ವತ್ಥ ನಾರಾಯಣ ಅವರಿಗೆ ಯಾವ ಯಾವ ಉಪಕರಣ ಎಷ್ಟೆಷ್ಟು ಮೌಲ್ಯಕ್ಕೆ ದೊರೆಯುತ್ತದೆ ಎನ್ನುವ ಪ್ರಾಥಮಿಕ ಜ್ಞಾನ ಇಲ್ಲವೇ? ಈ ಹಗರಣವನ್ನು ತಡೆಯಲು ಏಕೆ ಇವರು ಮುಂದಾಗಲಿಲ್ಲ.  ಹೀಗಾಗಿ ಈ ವೈದ್ಯಕೀಯ ಪರಿಕರಗಳ ಖರೀದಿ ಹಗರಣದಿಂದ ಕರ್ನಾಟಕದ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜಾಗಿದೆ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ಹೇಳಿದರು.

ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಯಡಿಯೂರಪ್ಪ ಅವರು ಹಿಂದಿನ ಕಾಂಗ್ರೆಸ್ ಸರ್ಕಾರ ಹಾಳು ಮಾಡಿದ ಲೋಕಾಯುಕ್ತ ಸಂಸ್ಥೆಯನ್ನು  “ನಾನು ಕೇವಲ 24 ಗಂಟೆಯಲ್ಲಿ ಮರಳಿ ತರುವೆ” ಎಂದು ವೀರಾವೇಶದಿಂದ ಹೇಳಿದ್ದರು. ಆದರೆ ಈ ಮಿಶ್ರತಳಿ ಸರ್ಕಾರ 1 ವರ್ಷ ಪೂರೈಸುವ ಹೊತ್ತಿಗಾಗಲೇ  ಜನರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯಲು ಪ್ರಾರಂಭಿಸಿದೆ, ಲೋಕಾಯುಕ್ತವನ್ನು ಮರೆತಿದೆ ಎಂದು ಆರೋಪಿಸಿದರು.

ಕೆಲವು ದಿನಗಳ ಹಿಂದೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ವರ್ಗಾವಣೆ ಮಾಡಿ, ಅವರ ಮೇಲೆ  ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಸ್ಥಾಪಿಸಿರುವ ಬೃಹತ್ ಆರೈಕೆ ಕೇಂದ್ರಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ಆದ ಭ್ರಷ್ಟಾಚಾರದ ಆರೋಪ ಹೊರಿಸಲಾಯಿತು.  ಈ ಹಗರಣದ ಬಗ್ಗೆ ಮುಖ್ಯಮಂತ್ರಿಗಳೇ ನೇರವಾಗಿ ಪ್ರಸ್ತಾಪ ಮಾಡಿದ್ದರೂ, ಒಬ್ಬ ಅಧಿಕಾರಿ ಇಷ್ಟೊಂದು ಬೃಹತ್ ಪ್ರಮಾಣದ ಹಗರಣವನ್ನು ಯಾವುದೇ ರಾಜಕಾರಣಿಗಳ ಕುಮ್ಮಕ್ಕಿಲ್ಲದೇ, ರಕ್ಷಣೆ ಇಲ್ಲದೇ ನಡೆಸಲು ಸಾಧ್ಯವಿಲ್ಲ. ಈ ಹಗರಣದ ಹಿಂದೆ ಇರುವುದು ಡಿಸಿಎಂ ಅಶ್ವಥ್ ನಾರಾಯಣ ಅವರೇ  ಎಂದು ಆಮ್ ಆದ್ಮಿ ಪಕ್ಷ ನೇರವಾಗಿ ಆರೋಪ ಮಾಡುತ್ತದೆ ಎಂದು ಹೇಳಿದರು.

ಈ ಹಗರಣದ ಬಗ್ಗೆ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದ ಸಮಿತಿ ತನಿಖೆ ನಡೆಸಿದರೆ ಮಾತ್ರ ಸತ್ಯಾಂಶ ಹೊರಬರುವುದು ಎಂದರು.

ಸುವಿಧಾ ಕ್ಯಾಬಿನ್ ಹೆಸರಿನಲ್ಲಿ ಮತ್ತೊಂದು ಹಗರಣ
 ಪೌರ ಕಾರ್ಮಿಕರಿಗೆ ಸುವಿಧಾ ಕ್ಯಾಬಿನ್ ಸ್ಥಾಪಿಸುವ ಹೆಸರಿನಲ್ಲಿ ಬೇನಾಮಿ ಕಂಪೆನಿಗೆ 16 ಕೋಟಿ ಮೌಲ್ಯದ ಗುತ್ತಿಗೆ ನೀಡಲು ಹೊರಟಿರುವುದರ ಹಿಂದೆ ಡಿಸಿಎಂ ಅಶ್ವಥ್ ನಾರಾಯಣ ಅವರೂ ಇದ್ದಾರೆ ಎಂದು ಪಕ್ಷದ ಮುಖಂಡ ಶರತ್ ಖಾದ್ರಿ ಆರೋಪ ಮಾಡಿದರು.

ಆಗ್ರ್ಯಾ ಇನ್‌ಫ್ರಾಟೆಕ್ ಎನ್ನುವ ಅಸ್ತಿತ್ವವೇ ಇಲ್ಲದ ಸಂಸ್ಥೆಗೆ ನೀಡಲಾಗುತ್ತಿದ್ದು, 20 ಅಡಿ ಉದ್ದ, 8.5 ಅಡಿ ಅಗಲ, 8 ಅಡಿ ಎತ್ತರದ ಈ ಕ್ಯಾಬೀನ್‌ನಲ್ಲಿ ಪೌರ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯ, ಊಟ ಮಾಡಲು ಹಾಗೂ ಬಟ್ಟೆ ಬದಲಾಯಿಸಲು ಸ್ಥಳಾವಕಾಶ ನೀಡುವುದು ಇದರ ಉದ್ದೇಶ ಆದರೆ, ಮಾರುಕಟ್ಟೆ ದರದಲ್ಲಿ ಈ ಕ್ಯಾಬಿನ್ ಗಳನ್ನು ತಯಾರಿಸಲು ಸುಮಾರು 80 ಸಾವಿರ ಖರ್ಚಾಗುತ್ತದೆ. ಆದರೆ ಯಾವುದೇ ಅನುಭವವೇ ಇಲ್ಲದ ಹಾಗೂ ಅಸ್ತಿತ್ವವೇ ಇಲ್ಲದ ಸಂಸ್ಥೆಯಾದ ಆಗ್ರ್ಯಾ ಇನ್‌ಫ್ರಾಟೆಕ್ ಸಂಸ್ಥೆ ಒಂದು ಕ್ಯಾಬೀನ್‌ಗೆ 8 ಲಕ್ಷ ಎಂದು ದರ ನಿಗದಿ ಮಾಡಿ ಪೂರೈಸಲು ಮುಂದಾಗಿದೆ. ಇದರ ಹಿಂದಿನ ಹುನ್ನಾರ ಏನು ಎಂದು ಪ್ರಶ್ನಿಸಿದರು.

ಕೇವಲ ಬಾಯಿ ಮಾತಿನಲ್ಲಿ ಪೌರ ಕಾರ್ಮಿಕರ ಬಗ್ಗೆ ಉಪಚಾರ ತೋರಿಸಿ ಬೆನ್ನಿಗೆ ಚೂರಿ ಇರಿಯುವ ಕೆಲಸ ನಡೆಯುತ್ತಿದೆ‌. ಈ ಭ್ರಷ್ಟಾಚಾರದಲ್ಲಿ ತೊಡಗಿರುವ ಡಿಸಿಎಂ ಅಶ್ವಥ್ ನಾರಾಯಣ ಅವರೇ ಸ್ವತಃ ಮುಂದೆ ಬಂದು ರಾಜಿನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ರಾಜ್ಯ ಕಾನೂನು ಘಟಕದ ಅಧ್ಯಕ್ಷರಾದ ನಂಜಪ್ಪ ಕಾಳೇಗೌಡ ಆಗ್ರಹಿಸಿದರು.

 

Leave a Reply

error: Content is protected !!
LATEST
KSRTC ನೌಕರರ ವೇತನ ವಿಷಯದಲ್ಲಿನ ನಿಮ್ಮ ಗೋಸುಂಬೆ ಆಟಗಳಿಗೆ ಯಾರು ಇಲ್ಲಿ ತಲೆ ಕೆಡಿಸಿಕೊಳ್ಳುವುದಿಲ್ಲ..!! NWKRTC: ಪಿಎಫ್‌ ಲೋನ್‌ ಹಣ ರಿಲೀಸ್‌ಗೂ ಕೊಡಬೇಕು ಸಾವಿರಾರು ರೂ. ಲಂಚ - ಧನದಾಹಿ ಸಿ.ಎಸ್‌.ಗೌಡರ್‌ ಪರ ನಿಂತರೇ ಡಿಸಿ? ಸೆ.27ರಂದು EPS ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC & KSRTC ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಆರಂಭ- ಸ್ಥಗಿತಗೊಂಡ ರೈತರ ಕೆಲಸ ಕಾರ್ಯಗಳು ಸಾಲುಮರದ ತಿಮ್ಮಕ್ಕನವರಿಂದ ಮನುಕುಲ ರಕ್ಷಿಸುವ ಕೆಲಸವಾಗಿದೆ: ಗೃಹ ಸಚಿವ ಪರಮೇಶ್ವರ್‌ ಜನರ ಸಮಸ್ಯೆಗೆ ಧ್ವನಿಯಾಗಲಿದೆ ಎಎಪಿ: ಪಾರ್ಕ್, ಆಟದ ಮೈದಾನದಲ್ಲಿ ಅವ್ಯವಸ್ಥೆ ಇದ್ದರೆ ಫೋಟೊ, ವಿಡಿಯೋ ಕಳಿಸಿ ಬನ್ನೂರು ಕಾವೇರಿ ವೃತ್ತ, ಬಸವೇಶ್ವರ ಪ್ರತಿಮೆ ಬಳಿಯ ಸಿಸಿ ಕ್ಯಾಮರಾ ತೆರವಿಗೆ ಆಗ್ರಹಿಸಿ ಸಹಸ್ರಾರು ರೈತರ ಪ್ರತಿಭಟನೆ- ಆ... ಸೆ.27ರಂದು EPS ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC & KSRTC ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ WELCOME TO KSRTC ಸ್ನಾನಗೃಹ ಬಸ್ - ಕಳಪೆ ಬಸ್‌ ಬಿಟ್ಟ NWKRTC ನಿಗಮಕ್ಕೆ ಛೀಮಾರಿಹಾಕಿದ ಪ್ರಯಾಣಿಕ KSRTC: ಬಸ್‌ ಬರುತ್ತಿರುವುದ ಗಮನಿಸದೆ ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್‌ ಡಿಕ್ಕಿ- ಕಾಲು ಮುರಿತ