ತಿ.ನರಸೀಪುರ: ತಾಲೂಕಿನ ಬೀಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಡನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಕೊರೊನಾ ದೃಢಪಟ್ಟು ನಾಲ್ಕು ದಿನಗಳು ಕಳೆದರೂ ಅವರ ಮನೆಗೆ ಈವರೆಗೂ ಯಾವೊಬ್ಬ ಅಧಿಕಾರಿಯೂ ಭೇಟಿನೀಡಿಲ್ಲ. ಜತೆಗೆ ಕುಟುಂಬದವರನ್ನು ಹೋಂ ಕ್ವಾರಂಟೈನ್ ಮಾಡುವ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಕೋವಿಡ್-19 ಸೋಂಕಿತರ ಮನೆಯ ಅಕ್ಕಪಕ್ಕದಲ್ಲೇ ವಯಸ್ಸಾದವರು ಮತ್ತು ಮಕ್ಕಳು ಇವೆ ಒಂದು ವೇಳೆ ಅವರಲ್ಲಿ ಕಾಣಿಸಿಕೊಂಡರೆ ಏನು ಎಂಬ ಭಯದಲ್ಲಿ ಗ್ರಾಮಸ್ಥರು ಕಾಲಕಳೆಯುವಂತಾಗಿದೆ.
ಕಳೆದ ಮಂಗಳವಾರ (ಜುಲೈ21) ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟು ಆ ವ್ಯಕ್ತಿ ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಈವರೆಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ ಇಲ್ಲ ಆರೋಗ್ಯ ಇಲಾಖೆ ಅಧಿಕಾರಿಗಳಾಗಲಿ ತಕ್ಷಣಕ್ಕೆ ಬಂದು ಮುಂಜಾಗ್ರತಾ ಕ್ರಮ ಅನುಸರಿಸಿಲ್ಲ.
ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಂಗರಾಜು ಅವರಿಗೆ ಕರೆ ಮಾಡಿದರೆ ಅವರು ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ. ಈ ರೀತಿ ಬೇಜವಾಬ್ದಾರಿಯಿಂದ ಅಧಿಕಾರಿಗಳು ನಡೆದುಕೊಂಡರೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುವುದೆ.
ಕೊರೊನಾ ಪಾಸಿಟಿವ್ ವ್ಯಕ್ತಿಯೇ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ಕೊಟ್ಟರು ಇದುವರೆಗೂ ಯಾವ ಅಧಿಕಾರಿಗಳು ಸೂಕ್ತ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಲು ಮುಂದಾಗದಿರುವುದರಿಂದ ಕಳೆದ ನಾಲ್ಕು ದಿನದಿಂದ ಪ್ರಥಮ ಸಂಪರ್ಕದಲ್ಲಿದ್ದವರೂ ಸೇರಿ ಅವರ ಮನೆಯವರು ಓಡಾಡಿರುವ ಜಾಗದಲ್ಲಿ ಇನ್ನೆಷ್ಟು ಹಬ್ಬಿದಿಯೋ ಎಂಬ ಭಯ ಗ್ರಾಮಸ್ಥರಲ್ಲಿ ಉಂಟಾಗಿದೆ.