ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಉದ್ದೇಶದಿಂದ ಪಿಪಿಇ ಕಿಟ್ ತಯಾರಿಸುವ ಕಾರ್ಖಾನೆಗಳನ್ನು ತೆರೆಯಲು ಸರ್ಕಾರ ಉದ್ದೇಶಿಸಿದೆ ಎಂದು ಕಂದಾಯ ಸಚಿವ, ಬೆಂಗಳೂರು ದಕ್ಷಿಣ ವಲಯ ಕೋವಿಡ್ ಉಸ್ತುವಾರಿ ಆರ್. ಅಶೋಕ್ ಭಾನುವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಯಲ್ಲಿ ಭಾನುವಾರ ನಡೆದ ಸಭೆಯ ನಂತರ ಮಾತನಾಡಿ, ವೈದ್ಯಕೀಯ ಪರಿಕರಗಳಿಗೆ ಸಂಬಂಧಿತ ಕಾರ್ಖಾನೆಗಳನ್ನು ತೆರೆಯಲು ಅವಕಾಶ ನೀಡುವಂತೆ ಸಿಎಂ ಅವರಿಗೆ ಮನವಿ ಮಾಡಿದ್ದೇವೆ. ಅವರು ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
12 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಗಂಭೀರ ಪರಿಸ್ಥಿತಿ ಇದೆ. ಇನ್ನು ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲೂ ಲಾಕ್‌ಡೌನ್ ಜಾರಿಯೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. ಈ ಕುರಿತು ಚರ್ಚಿಸಲು ಸೋಮವಾರ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಇನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಲಾಕ್‌ಡೌನ್ ಕುರಿತ ಸಂಬಂಧ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಸದ್ಯ 7 ದಿನ ಮಾತ್ರ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಜನರು ಅನಗತ್ಯವಾಗಿ ಮನೆಯಿಂದ ಹೊರಬಾರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
Olledagli madi swalpa janarigadaru work sikkidage aguthe