ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜುಲೈ 14ರಿಂದ ಜಾರಿಗೆ ಬಂದಿರುವ ಲಾಕ್‌ಡೌನ್ ಇದೇ 21ರಂದು ಮುಗಿಯಲಿದ್ದು ಇದನ್ನು ಮತ್ತೆ ವಿಸ್ತರಿಸದೇ ಇರಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನ ಕೊರೊನಾ ನಿಯಂತ್ರಣ ಸಭೆಯಲ್ಲಿ ಸಿಎಂ ಈ ಬಗ್ಗೆ ಸ್ಪಷ್ಟವಾಗಿ ಈ ನಿರ್ಧಾರವನ್ನು ತಿಳಿಸಿದ್ದು, ಲಾಕ್ ಡೌನ್ ವಿಸ್ತರಣೆ ಬಗ್ಗೆ ಮೊನ್ನೆಯೂ ಬೇಡ ಎಂದು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಪದೇಪದೆ ಆ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದು ಹೇಳಿದ್ದಾರೆ.
ವಲಯಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಿ. ಟ್ರೇಸಿಂಗ್, ಟೆಸ್ಟಿಂಗ್ ಬಗ್ಗೆ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸಚಿವರಿಗೆ ಸಿಎಂ ಬಿಎಸ್‌ವೈ ಖಡಕ್ ಸೂಚನೆ ನೀಡಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಸೋಮಣ್ಣ, ಲಾಕ್ ಡೌನ್ ವಿಸ್ತರಣೆ ಬೇಡ, ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ. ಲಾಕೂ ಇಲ್ಲ, ಡೌನೂ ಇಲ್ಲ. ಸಿಎಂ ವಲಯವಾರು ಬಗ್ಗೆ ಪರಿಶೀಲನೆ ಮಾಡುತ್ತಾರೆ ಎಂದು ತಿಳಿಸಿದರು.
ಆದರೆ ಭಾನುವಾರ ಕರ್ಫ್ಯೂ ಇರುತ್ತದೆ. ಇದರ ಜತೆ ನೈಟ್ ಕರ್ಫ್ಯೂ ಇರುತ್ತದೆ. ಬುಧವಾರದಿಂದ ಲಾಕ್ ಡೌನ್ ಬೇಡ ಎಂಬ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.