ನ್ಯೂಡೆಲ್ಲಿ: ಅನ್ ಲಾಕ್-3 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿದ್ದು, ಕಂಟೈನ್ಮೆಂಟ್ ಜೋನ್ಗಳನ್ನು ಹೊರತುಪಡಿಸಿ, ಉಳಿದ ಪ್ರದೇಶಗಳಲ್ಲಿ ಆಗಸ್ಟ್ 5ರಿಂದ ಜಿಮ್, ಯೋಗ ಕೇಂದ್ರ ತೆರೆಯಲು ಅನುಮತಿ ನೀಡಿದೆ. ಇದರ ಜತೆಗೆ ರಾತ್ರಿ ಕರ್ಫ್ಯೂವನ್ನು ತೆರವುಗೊಳಿಸಿದೆ.
ಥಿಯೇಟರ್ ತೆರೆಯಲು ಶಿಫಾರಸು ಮಾಡಿದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಲಹೆಯನ್ನು ಗೃಹ ಇಲಾಖೆ ಪರಿಗಣಿಸಿಲ್ಲ. ಮೂರನೇ ಹಂತದ ಅನ್ಲಾಕ್ನಲ್ಲೂ ಥಿಯೇಟರ್ ಲಾಕ್ಡೌನ್ ಮುಂದುವರಿಯಲಿದೆ ಎಂದು ತಿಳಿಸಿದೆ.
ಇನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅನುಮತಿ ನೀಡಿದ್ದು, ಮೆಟ್ರೋ, ಶಾಲಾ, ಕಾಲೇಜ್ ಗಳು, ಕೋಚಿಂಗ್ ಸೆಂಟರ್ ಗಳು ಮತ್ತು ಚಿತ್ರ ಮಂದಿರಗಳ ಮೇಲಿನ ನಿರ್ಬಂಧವನ್ನು ಆಗಸ್ಟ್ 31ರ ವರೆಗೆ ಮುಂದುವರಿಸುವುದಾಗಿ ತಿಳಿಸಿದೆ.
ಆಗಸ್ಟ್ 31 ರವರೆಗೂ ಕಂಟೈನ್ ಮೆಂಟ್ ಜೋನ್ ಗಳಲ್ಲಿ ಕಠಿಣ ಲಾಕ್ ಡೌನ್ ಮುಂದುವರಿಯಲಿದ್ದು, 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಇರಬೇಕು. ತೀರಾ ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಬೇಕು. ಹಾಗೇ, ವಂದೇ ಭಾರತ್ ಮಿಷನ್ ಅಡಿ ಸೀಮಿತ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುವುದು. ಇದರ ಹೊರತಾದ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ ಇಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.