ಹಾಸನ: ಜಿಲ್ಲೆಯಲ್ಲಿ ಇಂದು ಹೊಸದಾಗಿ 67 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 953 ಕ್ಕೆ ಏರಿಕೆಯಾಗಿದೆ. ಈವರೆಗೆ 569 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 355 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದುವರೆಗೆ 29 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.
ಇಂದು ಮೃತ ಪಟ್ಟ 42 ವರ್ಷದ ವ್ಯಕ್ತಿಯು ಹಾಸನ ತಾಲೂಕಿಗೆ ಸಂಬಂಧಿಸಿದವರಾಗಿದ್ದು ಇವರು ಸಕ್ಕರೆ ಕಾಯಿಲೆಯಿಂದ ಹಾಗೂ ಉಸಿರಾಟದ ತೊಂದರೆಯಿಂದ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಇಂದು ಪತ್ತೆಯಾದ 67 ಪ್ರಕರಣಗಳಲ್ಲಿ 6 ಜನ ಅರಸೀಕೆರೆ ತಾಲೂಕಿನವರು, 3 ಮಂದಿ ಚನ್ನರಾಯಪಟ್ಟಣ ತಾಲೂಕಿನವರು, 23 ಜನ ಹಾಸನ ತಾಲ್ಲೂಕು, 8 ಜನ ಹೊಳೆನರಸೀಪುರ ತಾಲೂಕು, ಆಲೂರು ತಾಲೂಕಿನಲ್ಲಿ 8 ಜನ, 11 ಜನ ಅರಕಲಗೂಡು ತಾಲ್ಲೂಕು, 8 ಜನ ಬೇಲೂರು ತಾಲೂಕಿನವರಾಗಿದ್ದಾರೆ.