ಬೆಂಗಳೂರು: ಅಕ್ಕಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಕೊರೊನಾ ಸೋಂಕಿನಿಂದ ಸಮಸ್ಯೆ ಇದ್ದರೂ ಪ್ರತಿ ತಿಂಗಳು ಒಂದನೇ ತಾರೀಖಿಗೆ ಸಾರಿಗೆ ನೌಕರರ ವೇತನವನ್ನು ತಪ್ಪದೆ ನೌಕರರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
ಆದರೆ ಕರ್ನಾಟಕ ರಾಜ್ಯದ KSRTC , BMTC ಸೇರಿ ನಾಲ್ಕೂ ಸಾರಿಗೆ ಸಂಸ್ಥೆಗಳ ನೌಕರರಿಗೆ ಜೂನ್ ತಿಂಗಳ ಸಂಬಳ ಇನ್ನೂ ಪಾವತಿಯಾಗಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸಂಸ್ಥೆಗಳು ಅನುದಾನಕ್ಕಾಗಿ ಕಾಯುತ್ತಿವೆ.
ಮೊದಲ ಹಂತದ ಲಾಕ್ಡೌನ್ ತೆರವುಗೊಂಡ ನಂತರ ಸಾರಿಗೆ ಬಸ್ ಗಳ ಸಂಚಾರ ಇದ್ದರೂ ಸಹ ವೆಚ್ಚ ಸರಿದೂಗಿಸಲು ಬರುವ ಆದಾಯ ಸಾಲುತ್ತಿಲ್ಲ. ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಕರೆದೊಯ್ಯಬೇಕಿರುವ ಕಾರಣ ಡೀಸೆಲ್ ವೆಚ್ಚಕ್ಕೂ ಬರುವ ಹಣ ಸಾಕಾಗುತ್ತಿಲ್ಲ ಎಂದು ನಾಲ್ಕು ಸಂಸ್ಥೆಗಳ ಎಂಡಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಇನ್ನು ನಾಲ್ಕು ಸಂಸ್ಥೆಗಳ ನೌಕರರಿಗೆ ವೇತನ ನೀಡಲು 326 ಕೋಟಿ ರೂ. ಅನುದಾನ ಬೇಕಿದ್ದು, ಈ ಅನುದಾನ ಕೋರಿ ಸರ್ಕಾರಕ್ಕೆ ಕೆಎಸ್ಆರ್ಟಿಸಿ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇನ್ನು ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಕಳೆದ ತಿಂಗಳು ಕೂಡ ವಿಳಂಬವಾಗಿಯೇ ಜೂನ್ 15ರ ನಂತರ ವೇತನ ಪಾವತಿಸಲಾಗಿತ್ತು. ಈ ತಿಂಗಳು ಹಣಕಾಸು ಇಲಾಖೆ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ.
ಅನುದಾನ ಬಿಡುಗಡೆ ಬಗ್ಗೆ ಚರ್ಚೆ ನಡೆದಿದೆ ಎರಡು ಮೂರು ದಿನಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಬರುವ ನಿರೀಕ್ಷೆ ಇದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.
ಆಂಬುಲೆನ್ಸ್ ಚಾಲನೆಗೂ ಸಾರಿಗೆ ನೌಕರರು ಸಿದ್ಧ
ಎರವಲು ಸೇವೆ ಮೇಲೆ ಬೇರೆ ಇಲಾಖೆಗೆ ನಿಯೋಜಿಸಿದರೂ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಕರ್ನಾಟಕ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ. ಪೊಲೀಸ್, ಆರೋಗ್ಯ ಇಲಾಖೆ ಸೇರಿ ಯಾವುದೇ ಇಲಾಖೆಗಳಲ್ಲಿ ಕೆಲಸ ಮಾಡುಲು ನಾವು ಸಿದ್ದರಿದ್ದೇವೆ. ನಮಗೂ ಕೆಲಸ ಮಾಡದೆ ವೇತನ ಕೇಳಲು ಮನಸ್ಸಿಲ್ಲ ಎಂದು ಹೇಳಿದ್ದಾರೆ.
ಇನ್ನು ಸರಿಯಾದ ಪಿಪಿಇ ಕಿಟ್ ವಿಮಾ ಸೌಲಭ್ಯ ಸೇರಿ ಸುರಕ್ಷತೆ ಒದಗಿಸಿದರೆ ಆಂಬುಲೆನ್ಸ್ ಚಾಲನೆಗೂ ಇಲ್ಲ ಎನ್ನುವುದಿಲ್ಲ. ಜತೆಗೆ ನೌಕರರನ್ನು ಸರಿಯಾಗಿ ಬಳಸಿಕೊಂಡು ಸಂಸ್ಥೆಗಳು ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು. ನಮ್ಮ ಸಂಸಾರಗಳು ನಡೆಯುತ್ತಿರುವುದು ವೇತನದ ಆಧಾರದ ಮೇಲೆಯೆ ಎಂಬುದನ್ನು ಸರ್ಕಾರ ಕೂಡ ಗಣನೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
Super sir