ಭೋಪಾಲ್: ಮಧ್ಯಪ್ರದೇಶದ ರಾಜ್ಯಪಾಲ ಲಾಲ್‌ಜಿ ಟಂಡನ್ (85) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಜೂನ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆ ಜತೆಗೆ ಜ್ವರ ಮತ್ತು ಮೂತ್ರಕೋಶದ ಸಮಸ್ಯೆಯಿಂದ ಲಾಲ್‌ಜಿ ಬಳಲುತ್ತಿದದ್ದರು. ಹೀಗಾಗಿ ಜೂನ್ 11ರಂದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಸಣ್ಣ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿತ್ತು. ಆದರೆ, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರಲಿಲ್ಲ ಎಂದು ಪುತ್ರ ಅಶುತೋಷ್ ಟಂಡನ್ ತಿಳಿಸಿದ್ದಾರೆ.
ಟಂಡನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಮಧ್ಯಪ್ರದೇಶದ ಉಸ್ತುವಾರಿ ರಾಜ್ಯಪಾಲರಾಗಿದ್ದರು. ಎರಡು ವಾರದ ಹಿಂದೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನೂತನ ಸಚಿವರಿಗೆ ಅವರೇ ಪ್ರಮಾಣ ವಚನ ಬೋಧಿಸಿದ್ದರು.
ಮಧ್ಯಪ್ರದೇಶದ 22ನೇ ರಾಜ್ಯಪಾಲರಾಗಿ ಲಾಲ್‌ಜಿ ಟಂಡನ್ ಅಧಿಕಾರ ವಹಿಸಿಕೊಂಡಿದ್ದರು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದ ಲಾಲ್‌ಜಿ ಅಟಲ್ ಬಿಹಾರಿ ವಾಜಪೇಯಿ ಅವರು ಗರಡಿಯಲ್ಲಿ ಪಳಗಿದವರು.
ಮುಖ್ಯಮಂತ್ರಿ ಬಿಎಸ್‌ವೈ ಸಂತಾಪ
ಮಧ್ಯಪ್ರದೇಶದ ರಾಜ್ಯಪಾಲ ಲಾಲ್‌ಜಿ ಟಂಡನ್ ಅವರ ನಿಧನದ ವಿಷಯ ಕೇಳಿದಾಗ ತೀವ್ರ ದುಃಖವಾಯಿತು. ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಾರ್ಥಿಸಿ, ಸಂತಾಪ ಸೂಚಿಸಿದ್ದಾರೆ.