ಮಂಡ್ಯ: ಜಿಲ್ಲೆಯಲ್ಲಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟೆ ಸುತ್ತಮುತ್ತಲ್ಲ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಒತ್ತಾಯಿಸಿ ಇಂದು ನಗರದಲ್ಲಿ ಹಮ್ಮಿಕೊಂಡಿರುವ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವಾಹನಗಳ ಸಂಚಾರ ಯಥಾಸ್ಥಿಯಿದೆ.
ಕಾವೇರಿ ಕೆಆರ್‌ಎಸ್ ಉಳುವಿಗಾಗಿ ಜನಾಂದೋಲನ ಸಮಿತಿ ನೇತೃತ್ವದಲ್ಲಿ ರೈತ ಸಂಘ, ಕರುನಾಡ ಸೇವಾಕರ ಸಂಘಟನೆ, ಆಟೋ ಡ್ರೈವರ್ಸ್ ಅಸೋಸಿಯೇಷನ್, ಜಯ ಕರ್ನಾಟಕ, ಭಾರತೀಯ ಸಂವಿಧಾನ ಹಿತರಕ್ಷಣ ವೇದಿಕೆ, ಕಬ್ಬು ಬೆಳೆಗಾರರ ಸಂಘ, ಒಕ್ಕಲಿಗರ ಸೇವಾ ಟ್ರಸ್ಟ್ ಮತ್ತು ದಲಿತಾ ಸಂಘರ್ಷ ಸಮಿತಿ (ಕೃಷ್ಣಪ್ಪ) ಕಾರ್ಯಕರ್ತರು ಬಂದ್‌ಗೆ ಮಾಡಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿದ್ದರು. ಇದರಿಂದ ಬಂದ್ ವಿಫಲಗೊಂಡಿತು.
ಕೊರೊನಾ ವಿಶ್ವಮಾರಿ ರಾಜ್ಯಾದ್ಯಂತ ರಣಕೇಕೆ ಹಾಕುತ್ತಿರುವುದರಿಂದ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ನೀವು ಒಟ್ಟುಗೂಡಿ ಬಂದ್ ಪ್ರತಿಭಟನೆ ಮಾಡಿದರೆ. ಕೋವಿಡ್‌ನಿಯಮ ಉಲ್ಲಂಘನೆಯಾದಂತಾಗುತ್ತದೆ ಎಂದು ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದ್ದರಿಂದ ಬಂದ್ ಸಫಲವಾಗಲಿಲ್ಲ.
ಆದರೂ ಸಂಘಟನೆಗಳ ಕಾರ್ಯಕರ್ತರು ಕೆಆರ್‌ಎಸ್ ಸುತ್ತಮುತ್ತ ಕೆಲವು ಸ್ಥಳೀಯ ರಾಜಕಾರಣಿಗಳು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಅಣೆಕಟ್ಟೆಗೆ ಹಾನಿಯಾಗುತ್ತಿದೆ ಎಂದು ಆದ್ದರಿಂದ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಯಾವುದೇ ಬಂದ್ ಮಾಡದೆ ಸಂಘಟನೆಗಳು ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಚಿನಕುರುಳಿ, ಹೊನಗಾನಹಳ್ಳಿ, ದೊಡ್ಡಭೋಗನಹಳ್ಳಿ, ಮೊಳೆಸಂದ್ರ, ಅಲ್ಪಳ್ಳಿ, ಕಟ್ಟೇರಿ, ಕಣಿವೆಕೊಪ್ಪಲು, ಚಂದ್ರೆ ಸೇರಿ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಕ್ರಮಕೈಗೊಳ್ಳಬೇಕು. ಈ ಮೂಲಕ ಕೆಆರ್‌ಎಸ್ ಅಣೆಕಟ್ಟೆಯನ್ನು ಉಳಿಸಬೇಕು ಎಂದು ಆಗ್ರಹಿಸಿದರು.