ಮೈಸೂರು: ಕನ್ನಡ, ಹಿಂದಿ, ತಮಿಳು ಭಾಷೆಗಳ ನೂರಾರು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟಿ ಬಿ. ಶಾಂತಮ್ಮ(95) ಭಾನುವಾರ ಸಂಜೆ ವಿಧಿವಶರಾಗಿದ್ದಾರೆ.
ಶಾಂತಮ್ಮ ಹಲವು ವರ್ಷಗಳಿಂದ ಮೈಸೂರಿನ ತಮ್ಮ ಮಗಳ ಮನೆಯಲ್ಲಿ ವಾಸವಾಗಿದ್ದರು. ಶನಿವಾರ ಸಂಜೆ ಸುಮಾರು 4 ಗಂಟೆಯಲ್ಲಿ ಹಠಾತ್ತಾಗಿ ಕುಸಿದುಬಿದ್ದಿದ್ದ ಅವರನ್ನು ತಕ್ಷಣ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು ಎನ್ನಲಾಗಿದೆ. ಭಾನುವಾರ ಸಂಜೆ 5.30ಕ್ಕೆ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
ಚಿನ್ನಾರಿ ಮುತ್ತ, ಚಂದವಳ್ಳಿ ತೋಟ, ಕೆಂಡದ ಮಳೆ, ಬಾಂಬೆ ದಾದಾ, ಗಜೇಂದ್ರ, ಶ್ರುತಿ ಸೇರಿದಾಗ, ಇಂದಿನ ಭಾರತ. ಲಾಕ್ಅಪ್ ಡೆತ್, ರೂಪಾಯಿ ರಾಜ ಸೇರಿ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇಂದು ಕೋವಿಡ್ 19 ಸ್ವಾಬ್ ಟೆಸ್ಟ್ ಸೇರಿದಂತೆ ಹಲವು ವರದಿಗಳು ಬರಬೇಕಿದ್ದು, ಆ ಬಳಿಕ ಅಂತ್ಯಕ್ರಿಯೆ ಮಾಡುವುದಾಗಿ ಶಾಂತಮ್ಮ ಅವರ ಪುತ್ರಿ ಸುಮ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಂಗಭೂಮಿ ಹಿನ್ನೆಲೆಯಿಂದ ಬಂದ ಶಾಂತಮ್ಮ, ಡಾ. ರಾಜ್ ಕುಮಾರ್ ಅವರ ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದರು. ಬಿ. ಜಯಮ್ಮ ಅವರ ಸಂಬಂಧಿಯೂ ಆಗಿದ್ದರು. ಹಿರಿಯ ನಟ ದೊಡ್ಡಣ್ಣ ಅವರು ಶಾಂತಮ್ಮ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಹಿರಿಯ ನಟಿ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ
ನೂರಾರು ಚಲನಚಿತ್ರಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿ ಜನಮನ ಗೆದ್ದಿದ್ದ ಹಿರಿಯ ಕಲಾವಿದೆ ಶಾಂತಮ್ಮ ಅವರ ಅಗಲಿಕೆ ಬಹಳ ದುಃಖಕರ. ಈ ನೋವು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
Om shanthi