ನ್ಯೂಡೆಲ್ಲಿ: ಭಾರತದ ಭೂಮಿಯನ್ನು ವಶಪಡಿಸಿಕೊಳ್ಳಲು ಮತ್ತು ಅದರ ಆಂತರಿಕ ಸಂಘರ್ಷದಿಂದ ಅಲ್ಲಿನ ಜನರ ದೃಷ್ಟಿಯನ್ನು ಬೇರೆ ಕಡೆಗೆ ಸೆಳೆಯುವ ತಂತ್ರದಿಂದ ಪಾಕಿಸ್ತಾನ 21ವರ್ಷಗಳ ಹಿಂದೆ ದುಷ್ಕೃತ್ಯ ಎಸಗಿತ್ತು. ಅದಕ್ಕೆ ನಮ್ಮ ಯೋಧರು ತಕ್ಕ ಪಾಠ ಕಳಿಸಿದರು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಧರ ತ್ಯಾಗ ಬಲಿದಾವನ್ನು ಸ್ಮರಿಸಿದ್ದಾರೆ.
ಇಂದು ಕಾರ್ಗಿಲ್ ವಿಜಯ ದಿವಸ. ಕಾರ್ಗಿಲ್ ಹುತಾತ್ಮ ಯೋಧರಿಗೆ ನನ್ನ ಧನ್ಯವಾದಗಳು. 21 ವರ್ಷಗಳ ಹಿಂದೆ ಇದೇ ದಿನ ನಾವು ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ್ದೇವೆ ಎಂದರು.
ಕಾರ್ಗಿಲ್ ಯುದ್ಧದಲ್ಲಿ ಭಾರತ ಪಾಕಿಸ್ತಾನ ಮಣಿಸಿದ ಐತಿಹಾಸಿಕ ದಿನಕ್ಕಿಂದು 21 ವರ್ಷ ತುಂಬಿದ್ದು, 21 ವರ್ಷಗಳ ಹಿಂದೆ ಇದೇ ದಿನ ನಾವು ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ್ದೆವು. ಕಾರ್ಗಿಲ್ ಯುದ್ಧದಿಂದ ನಮ್ಮ ಯೋಧರ ಶಕ್ತಿ ಇಡೀ ವಿಶ್ವಕ್ಕೇ ಪರಿಚಯವಾಗಿದೆ ಎಂದು ಕಾರ್ಗಿಲ್ ವಿಜಯ ದಿವಸ ಹಿನ್ನೆಲೆಯಲ್ಲಿ ಮೋದಿಯವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಯೋಧರ ಬಲಿದಾನವನ್ನು ಸ್ಮರಿಸಿದ್ದಾರೆ.
21 ವರ್ಷಗಳ ಹಿಂದೆ ಈ ದಿನ ಸೈನ್ಯ ಕಾರ್ಗಿಲ್ ಯುದ್ಧವನ್ನು ಗೆದ್ದಿತು. ಆಗ ಭಾರತ ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಲು ಪ್ರಯತ್ನಿಸುತ್ತಿತ್ತು. ಆದರೆ, ಒಂದು ಮಾತಿದೆ, ವಿನಾ ಕಾರಣ ಎಲ್ಲರೊಂದಿಗೂ ದ್ವೇಷ ಸಾಧಿಸುವುದು ದುಷ್ಟರ ಸ್ವಭಾವ ಎಂದು ಹೀಗೆ ಹೇಳುವ ಮೂಲಕ ವಿಜಯ್ ದಿವಸ್ ನೆನೆಯುತ್ತಲೇ ಪಾಕಿಸ್ತಾನಕ್ಕೆ ಚಾಟಿ ಬೀಸಿದರು.
ಯೋಧರಿಗಾಗಿ ವೆಬ್’ಸೈಟ್ ಮೂಲಕ ಗೌರವ ಸಲ್ಲಿಸಿ, ಅಟಲ್ ಬಿಹಾರಿ ವಾಜಪೇಯಿ ಮಾತು ಇಂದಿಗೂ ಪ್ರಸ್ತುತವಾಗಿದೆ. ಕಾರ್ಗಿಲ್ ಯುದ್ಧ ಹೊಸ ಮಂತ್ರ ಶುರುಮಾಡಿದೆ. ಎಂದಿದ್ದರು. ಯುದ್ಧದ ಪರಿಸ್ಥಿತಿ ನಮ್ಮ ಮನೋಬಲವನ್ನು ಬದಲಾಯಿಸಿತು. ನಮ್ಮ ಆಚಾರ, ವಿಚಾರ, ವ್ಯವಹಾರ,ಮರ್ಯಾದೆ ಎಲ್ಲವೂ ಬದಲಾಯಿತು. ಸಂಘ ಶಕ್ತಿ ಉಘೇ ಉಘೇ ಎಂಬುದನ್ನು ಎತ್ತಿ ತೋರಿಸಲಾಗಿಯಿತು ಎಂದು ತಿಳಿಸಿದರು.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಕುರಿತು ಮಾತನಾಡಿದ ಅವರು, ಕೊರೊನಾ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಬಿಟ್ಟಿದೆ. ಕೊರೊನಾ ಎದುರಿಸಲು ಮತ್ತಷ್ಟು ಶಕ್ತರಾಗಬೇಕು. ಮಾಸ್ಕ್ ಸದ್ಯ ನಮ್ಮ ಜೀವನದ ಅಂಗವಾಗಿದೆ. ಮಾತನಾಡುವಾಗ ಮಾಸ್ಕ್ ಇರಲೇಬೇಕು. ಆದರೆ, ಮಾಸ್ಕ್ ತೆಗೆದು ಮಾತನಾಡುತ್ತೀರಾ, ಇದರಿಂದ ಸೋಂಕು ಹರಡುತ್ತದೆ ಎಂದು ಬೇರಸ ವ್ಯಕ್ತಪಡಿಸಿದ ಅವರು, ವೈದ್ಯರು ಸತತ 8 ಗಂಟೆಗಳ ಕಾಲ ಮಾಸ್ಕ್ ಧರಿಸಿರುತ್ತಾರೆಂದು ಉದಾಹರಣೆ ನೀಡಿದರು.
ಜಮ್ಮುವಿನ ಟ್ರೆವಾ ಎಂಬಲ್ಲಿನ ಸರಪಂಚರಾದ ಬಲ್ಬೀರ್ ಕೌರ್ ಎಂಬುವವರು ತಮ್ಮ ಪಂಚಾಯಿತಿಯಲ್ಲಿ 30 ಹಾಸಿಗೆಗಳ ಕ್ವಾರಂಟೈನ ಬೆಡ್‌ಗಳನ್ನು ನಿರ್ಮಿಸಿದ್ದಾರೆ. ಗ್ಯಾಂಡರ್‌ಬಾಲ್‌ನ ಚೌಂಟ್ಲಿವಾರ್‌ನ ಜೈತುನಾ ಬೇಗಂ ತಮ್ಮ ಪಂಚಾಯಿತಿ ಕೋವಿಡ್ ವಿರುದ್ಧ ಹೋರಾಡಲಿದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಘೋಷಿಸಿದ್ದಾರೆ ಎಂದು ಹೇಳಿದ ಪ್ರಧಾನಿ, ತಮ್ಮ ಕಾರ್ಯಕ್ರಮದಲ್ಲಿ ಅವರ ಕೈಂಕರ್ಯಗಳನ್ನು ಸ್ಮರಿಸಿದರು.
‘ಜಮ್ಮು ಕಾಶ್ಮೀರದ ಅನಂತನಾಗ್ ಪುರಸಭೆ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ಕೇವಲ ರೂ.50,000 ರೂ ವೆಚ್ಚದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಇಡೀ ದೇಶದಲ್ಲಿ ಇಂತಹ ಅನೇಕ ಸ್ಪೂರ್ತಿದಾಯಕ ಕತೆಗಳಿವೆ ಎಂದು ಮೋದಿ ಹೇಳಿದರು.
ಈ ಬಾರಿಯ ರಕ್ಷಾ ಬಂಧನವನ್ನು ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಲು ಜನತೆ ಸಿದ್ಧತೆ ಕೈಗೊಂಡಿರುವುದು ಮತ್ತು ಅದನ್ನು ತಮ್ಮ ‘ಲೋಕಲ್ ಫಾರ್ ಓಕಲ್’ ಘೋಷಣೆಗೆ ಬೆಸೆಯುತ್ತಿರುವುದಕ್ಕೆ ಇದೇ ವೇಳೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹಬ್ಬದ ಸಂತೋಷವು ನಮ್ಮ ಸಮಾಜದಲ್ಲಿ ವ್ಯವಹಾರ ವಿಸ್ತರಿಸಲು ಸಹಾಯ ಮಾಡುತ್ತದೆ. ಅದು ಅವರಿಗೂ ಸಂತೋಷದಾಯಕ ಹಬ್ಬವಾಗಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಬೋರ್ಡ್ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸಿದ ಉತ್ತರ ಪ್ರದೇಶ, ಕೇರಳ, ತಮಿಳುನಾಡು ಮತ್ತು ಹರ್ಯಾಣದ ವಿದ್ಯಾರ್ಥಿಗಳ ಜೊತೆ ಇದೇ ವೇಳೆ ಪ್ರಧಾನಮಂತ್ರಿಗಳು ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಮುಂದಿನ ಗುರಿ, ಮನೆಯಲ್ಲಿನ ಪ್ರೋತ್ಸಾಹ ಮುಂತಾದ ವಿಚಾರಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ಕೊರೊನಾ ಸೋಂಕಿನಿಂದ ಆಗಸ್ಟ್ 15ರಂದು ಸ್ವಾತಂತ್ರ ಪಡೆಯಲು ಭಾರತೀಯರು ಸಂಕಲ್ಪ ಮಾಡಬೇಕು. ಆತ್ಮನಿರ್ಭರ ಭಾರತ ಸಾಧಿಸಲು. ಹೊಸದನ್ನು ಕಲಿಯಲು, ಹೊಸದನ್ನು ತಿಳಿಸಲು ನಮ್ಮ ಕರ್ತವ್ಯಗಳಿಗೆ ನಾವು ಬದ್ಧರಾಗಿರಬೇಕು ಎಂದೂ ಸಲಹೆ ನೀಡಿದ್ದಾರೆ.