ಬೆಂಗಳೂರು: ಒಂದು ವರ್ಷದ ಹಿಂದೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಮಾಜಿ ಶಾಸಕ ಎ.ಎಚ್. ವಿಶ್ವನಾಥ್ ಹಾಗೂ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸೇರಿದಂತೆ ಐವರನ್ನು ರಾಜ್ಯ ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಲಾಗಿದೆ.
ಎ.ಎಚ್ ವಿಶ್ವನಾಥ, ಸಿ..ಪಿ. ಯೋಗೇಶ್ವರ್, ಭಾರತಿ ಶೆಟ್ಟಿ, ಸಾಬಣ್ಣ ತಳವಾರ, ಶಾಂತಾರಾಂ ಸಿದ್ದಿ ಅವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಬುಧವಾರ ಆದೇಶ ಹೊರಡಿಸಿದ್ಧಾರೆ.
ಕಲಾ ಕ್ಷೇತ್ರದಿಂದ ಸಿ.ಪಿ. ಯೋಗೇಶ್ವರ್, ಸಾಹಿತ್ಯ ಕ್ಷೇತ್ರದಿಂದ ಎ.ಎಚ್. ವಿಶ್ವನಾಥ್, ಸಮಾಜಸೇವೆ ಕ್ಷೇತ್ರದಿಂದ ಭಾರತಿ ಶೆಟ್ಟಿ, ವಿಶಿಷ್ಟ ಸೇವಾ ಕ್ಷೇತ್ರದಿಂದ ಶಾಂತಾರಾಂ ಸಿದ್ದಿ ಹಾಗೂ ಶಿಕ್ಷಣ ಕ್ಷೇತ್ರದಿಂದ ಪ್ರೊ. ಸಾಬಣ್ಣ ತಳವಾರ್ ಅವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಲಾಗಿದೆ.
ಇಂದು ಬೆಳಗ್ಗೆಯಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನುಭೇಟಿಮಾಡಿ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸಿದ್ದರು.
ಸಿ.ಪಿ. ಯೋಗೇಶ್ವರ್: ಮಾಜಿ ಸಚಿವ, ರಾಮನಗರ ಜಿಲ್ಲೆ, ಒಕ್ಕಲಿಗ ಸಮುದಾಯ. ಎ.ಎಚ್. ವಿಶ್ವನಾಥ್: ಮಾಜಿ ಸಚಿವ, ಮೈಸೂರು ಜಿಲ್ಲೆ, ಕುರುಬ ಸಮುದಾಯ. ಭಾರತಿ ಶೆಟ್ಟಿ: ಪರಿಷತ್ ಮಾಜಿ ಸದಸ್ಯೆ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ, ಶಿವಮೊಗ್ಗ ಜಿಲ್ಲೆ, ಬಂಟ ಸಮುದಾಯ. ಶಾಂತಾರಾಮ ಸಿದ್ದಿ: ಸಂಘ ಪರಿವಾರದ ವನವಾಸಿ ಕಲ್ಯಾಣ ಸಂಘಟನೆಯಲ್ಲಿ ಸಕ್ರಿಯ, ಉತ್ತರ ಕನ್ನಡ ಜಿಲ್ಲೆ, ಬುಡಕಟ್ಟು ಸಮುದಾಯ. ಪ್ರೊ. ಸಾಬಣ್ಣ ತಳವಾರ: ಬೆಳಗಾವಿ ರಾಣಿ ಚೆನ್ನಮ್ಮ ವಿವಿಯಲ್ಲಿ ಪ್ರೊಫೆಸರ್, ಕಲ್ಬುರ್ಗಿ ಜಿಲ್ಲೆ, ಕೋಳಿ ಸಮುದಾಯದವರಾಗಿದ್ದಾರೆ.