NEWSನಮ್ಮಜಿಲ್ಲೆ

NWKRTC: ಉತ್ತಮ ರಸ್ತೆ ಇದ್ದರು ಈವರೆಗೂ ಬಸ್‌ಗಳನ್ನೇ ಕಾಣದ ನಾಗುರ್ಡಾ ಗ್ರಾಮ- ಏನು ಮಾಡುತ್ತಿದ್ದಾರೆ ಕ್ಷೇತ್ರದ ಶಾಸಕರು?

ವಿಜಯಪಥ ಸಮಗ್ರ ಸುದ್ದಿ

ಖಾನಾಪುರ: ತಾಲೂಕು ಕೇಂದ್ರದಿಂದ ಕೇವಲ 7 ಕಿ.ಮೀ. ದೂರದಲ್ಲಿರುವ ನಾಗುರ್ಡಾ ಗ್ರಾಮ ಇದೂವರೆಗೆ ಸಾರಿಗೆ ಸೌಕರ್ಯವನ್ನೇ ಕಂಡಿಲ್ಲ. ಇದರಿಂದ ಇತರ ಮೂಲ ಸೌಕರ್ಯಗಳಿಂದಲೂ ಗ್ರಾಮವು ವಂಚಿತವಾಗಿರುವುದು ಭಾರಿ ನೋವಿನ ಸಂಗತಿ.

ಹೌದು! ಸುಮಾರು 700 ಜನಸಂಖ್ಯೆ ಇರುವ ಈ ಗ್ರಾಮಕ್ಕೆ ಈವರೆಗೂ ಬಸ್ ಸೇವೆಯೆ ಇಲ್ಲವಾಗಿದೆ. ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದಿದ್ದರೂ ಇಲ್ಲಿನ ಜನ ಬಸ್ಸಿನ ಮುಖ ನೋಡಿಲ್ಲ ಎಂದರೆ ನಮ್ಮ ವ್ಯವಸ್ಥೆ ಎತ್ತ ಸಾಗಿದೆ ಎಂಬುಕ್ಕೆ ಕನ್ನಡಿಯಾಗಿದೆ ಎಂದು ಹೇಳಿದರು ತಪ್ಪಾಗಲಾರದು.

ಜಾಂಬೋಟಿ ಹೋಬಳಿಗೆ ಒಳಪಡುವ ಈ ನಾಗುರ್ಡಾ ಗ್ರಾಮ ಜತ್ತ– ಜಾಂಬೋಟಿ ರಾಜ್ಯ ಹೆದ್ದಾರಿಯಿಂದ 2 ಕಿ.ಮೀ ದೂರದಲ್ಲಿದೆ. ರಸ್ತೆಯ ವಿಶ್ರಾಂತವಾಡಿ ಗ್ರಾಮದ ಬಳಿಯ ನಾಗುರ್ಡಾ ಕ್ರಾಸ್‌ನಿಂದ ನಾಗುರ್ಡಾ ಗ್ರಾಮದವರೆಗೆ ಉತ್ತಮ ಗುಣಮಟ್ಟದ ರಸ್ತೆಯೂ ಕೂಡ ಇದೆ.

ರಸ್ತೆಯ ಸ್ಥಿತಿ ಉತ್ತಮವಾಗಿದ್ದರೂ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಲ್ಲಿ ಸಾರಿಗೆ ಇಲಾಖೆ ಮತ್ತು ತಾಲೂಕು ಆಡಳಿತ ಗಮನಹರಿಸಿಲ್ಲದಿರುವ ಅಚ್ಚರಿಗೂ ಕಾರಣವಾಗಿತ್ತಿದೆ. ಇನ್ನು ಅಧಿಕಾರಿಗಳ ಈ ಬೇಜವಾಬ್ದಾರಿಯಿಂದಾಗಿ ಗ್ರಾಮದ ನಾಗರಿಕರು, ವಿದ್ಯಾರ್ಥಿಗಳು ತಮ್ಮೂನಿರಿಂದ ನಾಗುರ್ಡಾ ಕ್ರಾಸ್‌ವರೆಗಿನ 2 ಕಿ.ಮೀ ನಡೆದು ಮುಂದಿನ ಪ್ರಯಾಣ ಬೆಳೆಸುವ ಅನಿವಾರ್ಯ ಇದೆ.

ರಸ್ತೆ ಇದ್ದರೂ ಬಸ್‌ ಇಲ್ಲ. ಚುನಾವಣೆ ಬಂದಾಗ ಮಾತ್ರ ಈ ಊರಿಗೆ ಸರ್ಕಾರಿ ಬಸ್ ಬಂದು ಚುನಾವಣೆಗೆ ನಿಯೋಜಿಸಿದ ಸಿಬ್ಬಂದಿಯನ್ನು ಇಳಿಸಿ ಮುಂದಿನ ಊರಿಗೆ ಹೋಗುವ ಪರಿಪಾಠವಿದೆ. ಇಲ್ಲಿಯ ರೈತರು ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಯನ್ನು ಹೆಚ್ಚಾಗಿ ಕೈಗೊಂಡಿದ್ದಾರೆ. ಇಲ್ಲಿಯ ಅಂತರ್ಜಲ ಉತ್ತಮವಾಗಿದ್ದು, ಮಣ್ಣೂ ಫಲವತ್ತಾಗಿದೆ. ಪರಿಣಾಮ ಈ ಭಾಗದ ಅಂದಾಜು 4,000 ಎಕರೆ ಪ್ರದೇಶದಲ್ಲಿ ಬೆಳೆಯುವ ಕಬ್ಬು ಇಡೀ ತಾಲೂಕಿನಲ್ಲೇ ಅತ್ಯಂತ ಹೆಚ್ಚು ಇಳುವರಿ ಕೊಡುವ ಬೆಳೆ ಎಂದು ಗುರುತಿಸಲ್ಪಟ್ಟಿದೆ.

ಉಳಿದಂತೆ ಭತ್ತ, ಗೋಡಂಬಿ, ಮಾವು, ಸಪೋಟ, ಬಾಳೆ ಬೆಳೆಗಳನ್ನು ಈ ಭಾಗದ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ನಾಗುರ್ಡಾ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ ಮತ್ತು ಗ್ರಾಮ ಪಂಚಾಯ್ತಿ ಕಚೇರಿಗಳಿವೆ.

ನರೇಗಾ ಯೋಜನೆಯಡಿ ಗ್ರಾಮದಲ್ಲಿ ವೈಯಕ್ತಿಕ ಮತ್ತು ಸಮುದಾಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಕ್ಕಾಗಿ ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ ನಾಗುರ್ಡಾ ಗ್ರಾಮ ಪಂಚಾಯ್ತಿಗೆ 2016ರ ಗಾಂಧಿ ಗ್ರಾಮ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ.

ಶಿಕ್ಷಣಕ್ಕೂ ಅಡೆತಡೆ: ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲದಿರುವುದರಿಂದ ಗ್ರಾಮದ ಹೆಣ್ಣು ಮಕ್ಕಳು ಪ್ರಾಥಮಿಕ ಶಿಕ್ಷಣದ ಬಳಿಕ ನಿತ್ಯ ಪರ ಊರಿಗೆ ಹೋಗಿಬರಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಗ್ರಾಮದಲ್ಲಿ ಉನ್ನತ ಶಿಕ್ಷಣ ಪಡೆದ ಹೆಣ್ಣುಮಕ್ಕಳ ಸಂಖ್ಯೆ ಒಂದಂಕಿಯನ್ನು ದಾಟಿಲ್ಲ. ಆದರೆ ಗ್ರಾಮದ 100ಕ್ಕೂ ಹೆಚ್ಚು ಗಂಡುಮಕ್ಕಳು ಕಷ್ಟಪಟ್ಟು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಶಿಕ್ಷಣವನ್ನು ಮುಗಿಸಿ ಭಾರತೀಯ ಸೈನ್ಯವನ್ನು ಸೇರಿ ದೇಶಕಾಯುವ ಕೆಲಸ ಮಾಡುತ್ತಿದ್ದಾರೆ.

ನಾಗುರ್ಡಾ ಗ್ರಾಮದಿಂದ ಕಾಟಗಾಳಿ ಮೊದೇಕೊಪ್ಪ ಮತ್ತು ನಾಗುರ್ಡಾ ವಾಡಾ ಗ್ರಾಮಗಳಿಗೆ ತೆರಳುವ ಸಂಪರ್ಕ ರಸ್ತೆ ಹಾಳಾಗಿದೆ. ಗ್ರಾಮದ ಮಕ್ಕಳು 7ನೇ ತರಗತಿಯ ಬಳಿಕ ಹೆಚ್ಚಿನ ಶಿಕ್ಷಣಕ್ಕಾಗಿ ಖಾನಾಪುರ ಪಟ್ಟಣವನ್ನು ಅವಲಂಬಿಸಬೇಕಿದೆ.

 ನಾಗುರ್ಡಾ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಿದರೆ ಗ್ರಾಮದ ಜನತೆಗೆ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಶೀಘ್ರದಲ್ಲೇ ಗ್ರಾಮಕ್ಕೆ ಬಸ್‌ ಸೌಲಭ್ಯ ಕಲ್ಪಿಸಬೇಕು. ಇದರಿಂದ ನಮ್ಮ ಗ್ರಾಮದ ಮಕ್ಕಳ ಭವಿಷ್ಯ ಕೂಡ ಉತ್ತಮವಾಗಲಿದೆ.
l ಚಂದ್ರಕಾಂತ ಕುಂಬಾರ ಗ್ರಾಮಸ್ಥ

ನಾಗುರ್ಡಾ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ಸಮುದಾಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಉತ್ತಮ ರಸ್ತೆಗಳಿದ್ದು ಬಸ್‌ ಬಿಡುವಂತೆ ಇಲಾಖೆಗೆ ಕೋರಲಾಗುವುದು. ಅಧಿಕಾರಿಗಳು ಮನಸ್ಸುಮಾಡಿದರೆ ಗ್ರಾಮಕ್ಕೆ ಬಸ್‌ ಬರುವುದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ.
l ವೀಣ ಸಾಯನಾಯ್ಕ ಪಿಡಿಒ ನಾಗುರ್ಡಾ ಗ್ರಾಪಂ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು