ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾಲಕನ ರೀಲ್ಸ್ ಹುಚ್ಚಿಗೆ ಎತ್ತಿನ ಗಾಡಿಗೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ವೇಳೆ ಎರಡು ಎತ್ತುಗಳು ಮೃತಪಟ್ಟು, ಗಾಡಿಯಲ್ಲಿದ್ದ ರೈತರಿಬ್ಬರಿಗೆ ಗಂಭೀರ ಗಾಯಗಳಾಗಿದ್ದವು.
ಈ ಸಂಬಂಧ ಸಂತ್ರಸ್ತರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ರೈತಪರ ಹೋರಾಟಗಾರರು ಆಗ್ರಹಿಸಿದ್ದಾರೆ.
ಬುಧವಾರ NWKRTC ಬಸ್ ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆ ಹೊರಟಿತ್ತು. ಈ ವೇಳೆ ಬಸ್ ಚಾಲಕ ಮೊಬೈಲ್‌ನಲ್ಲಿ ರೀಲ್ಸ್ ಮಾಡಿಕೊಂಡು ವಾಹನ ಚಲಾಯಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದ್ದು, ಎದುರಿಗೆ ಹೋಗುತ್ತಿದ್ದ ಎತ್ತಿನ ಗಾಡಿಗೆ ಹಿಂದಿನಿಂದ ಬಸ್ ಗುದ್ದಿ ಅವಘಡ ಸಂಭವಿಸಿತ್ತು.
ಘಟನೆ ಬಗ್ಗೆ ಮಾತನಾಡಿದ ರತ್ನ ಭಾರತ ರೈತ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡರ ಬಸನಗೌಡರ ಅವರು, ಬಸ್ ಚಾಲಕನ ಹುಚ್ಚಾಟದಿಂದ ರೈತನ ಎರಡು ಎತ್ತುಗಳು ಮೃತಪಟ್ಟಿವೆ. ಅಲ್ಲದೆ ಇಬ್ಬರು ರೈತರಿಗೂ ಗಂಭೀರ ಗಾಯವಾಗಿದೆ. ಹೀಗಾಗಿ ಕೂಡಲೇ ಬಸ್ ಚಾಲಕನ ಮೇಲೆ ಕ್ರಮ ಕೈಗೊಳ್ಳಬೇಕು.
ಅಲ್ಲದೆ ಗಾಯಾಳು ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕು. ಎತ್ತಿನಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳ ಸಾವು ಆಗಿದೆ. ರೈತ ಕೂಡ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಇನ್ನು ಇಂತಹ ಸಿಬ್ಬಂದಿ ವಿರುದ್ಧ ಸಾರಿಗೆ ನಿಗಮ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಅಪಘಾತದಿಂದ ಅನ್ನದಾತನಿಗೆ ಆಧಾರವಾಗಿದ್ದ ಎರಡು ಎತ್ತುಗಳು ಬಲಿಯಾಗಿವೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾರಿಗೆ ಸಿಬ್ಬಂದಿ ಬೇಜಾಬ್ದಾರಿತನ ಹೆಚ್ಚಾಗುತ್ತಿದೆ. ಸಾರಿಗೆ ಅಧಿಕಾರಿಗಳು ಇಂತಹ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹೋರಾಟ ಎಚ್ಚರಿಕೆ: ಇನ್ನೂ ಈ ಪ್ರಕರಣ ಸಂಬಂಧ ಯಾವುದೇ ಕಾರಣಕ್ಕೋ ರಾಜೀ ಮಾಡಿಕೊಳ್ಳದೇ ತನಿಖೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮೇಲಿಂದ ಮೇಲೆ ರೈತರಿಗೆ ತೊಂದರೆ ಆಗುತ್ತಿದೆ. ರೈತರಿಗೆ, ಸಾರ್ವಜನಿಕರಿಗೆ ಬಸ್‌ಗಳಿಂದ, ಚಾಲಕರಿಂದ ತೊಂದರೆ ಆಗದಂತೆ ನಿಗಮದ ಮೇಲಧಿಕಾರಿಗಳು ಗಮನ ಹರಿಸಬೇಕು. ನಮ್ಮ ಮನವಿ ನಿರ್ಲಕ್ಷಿಸಿದರೆ, ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.