ಹುಬ್ಬಳ್ಳಿ: ಉದ್ದೇಶ ಪೂರ್ವಕವಾಗಿ ವಾಹನ ತಪಾಸಣೆ ನಡೆಸಿ ನನ್ನನ್ನು ಅಮಾನತು ಮಾಡುವ ಸಂಚು ರೂಪಿಸಲಾಗಿದೆ ಎಂದು ಮನನೊಂದ ನಿರ್ವಾಹಕರೊಬ್ಬರು ಡ್ಯೂಟಿ ಮೇಲೆ ಇದ್ದಾಗಲೇ ವಿಸ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನವಲಗುಂದದ ಬಳಿ ನಡೆದಿದೆ.
ಹುಬ್ಬಳ್ಳಿಯಿಂದ ವಿಜಯಪುರ ಮಾರ್ಗವಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ (NWKRTC) ನವಲಗುಂದ ಘಟಕದ ನಿರ್ವಾಹಕ ಎಸ್.ಎನ್. ಚೀರ್ಚಿನಕಲ್ (ಬಿಲ್ ಸಂ :7658) ಎಂಬುವರೆ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು.
ಘಟನೆ ವಿವರ: ಶಕ್ತಿ ಯೋಜನೆಯಡಿ ಹಾಫ್ ಟಿಕೆಟ್ ( ₹ 83) ನೀಡಿಲ್ಲ ಎಂದು ತನಿಖಾಧಿಕಾರಿಗಳು ಉದ್ದೇಶ ಪೂರ್ವಕವಾಗಿಯೇ ನನಗೆ ಮೆಮೊ ಕೊಟ್ಟಿದ್ದಾರೆ ಎಂದು ಈ ರೀತಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇಂದು ವಾಹನ ತಪಾಸಣೆಗೆ ಬಂದು ಹಾಫ್ ಟಿಕೆಟ್ ಬಿಟ್ಟಿದ್ದೀಯ ಎಂದು ತನಿಖಾ ಸಿಬ್ಬಂದಿ ಮೆಮೋ ಕೊಟ್ಟಿದ್ದಾರೆ. ಇದರಿಂದ ಮಾನಸಿಕವಾಗಿ ವೇದನೆ ಅನುಭವಿಸಿದ ನಿರ್ವಾಹಕ ಚೀರ್ಚಿನಕಲ್ ಕೆರೂರರಲ್ಲಿ ವಿಷವನ್ನು ಸೇವಿಸಿದ್ದಾನೆ. ನಂತರ ಗದ್ದನಕೇರಿ ಕ್ರಾಸ್ ಬರುವಷ್ಟರಲ್ಲಿ ಬಾಯಲ್ಲಿ ನೊರೆ ಬರುವದನ್ನು ನೋಡಿದ ಪ್ರಯಾಣಿಕರು ವಾಹನ ನಿಲ್ಲಿಸಿ ಬಳಿಕ ಪ್ರಯಾಣಿಕರೇ ಆಂಬುಲೆನ್ಸ್ ಕರೆಸಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಒಯ್ಯಿರಿ ಎಂದು ವೈದ್ಯರು ತಿಳಿಸಿದ್ದರಿಂದ ಬಾಗಲಕೋಟ ವಿಭಾಗದ ಅಧಿಕಾರಿಗಳು ಕುಮಾರೇಶ್ವರ ಆಸ್ಪತ್ರೆಗೆ ಸೇರಿಸಿದ್ದಾರೆ. ಈಗ ICUನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ವೈದ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಜತೆಗೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
6ತಿಂಗಳಲ್ಲಿ 2ಬಾರಿ ಅಮಾನತು: ನಿರ್ವಾಹಕ ಚೀರ್ಚಿನಕಲ್ ಅವರನ್ನು 6 ತಿಂಗಳಲ್ಲಿ 2 ಬಾರಿ ಶಕ್ತಿ ಯೋಜನೆಯಡಿ ಅಮಾನತು ಮಾಡಲಾಗಿದೆ. ಜತೆಗೆ ಇವರು ಯಮನೂರು ಹತ್ತಿರ ಕಳೆದ 6 ತಿಂಗಳ ಹಿಂದೆ ಪ್ರಯಾಣಿಕರಿಂದ ಹಲ್ಲೆಗೊಳಗಾಗಿದ್ದರು.
ಈ ಎಲ್ಲದರ ಜತೆಗೆ ಇಂದು ಮೆಮೋ ಕೊಟ್ಟಿರುವುದರಿಂದ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಇನ್ಸಪೆಕ್ಟರ್ ಜಿ.ಪಿ.ಹಿರೇಮಠ್ ಅವರು ಈಗಾಗಲೇ 2 ಬಾರಿ ಕೇಶ ಬರೆದು ಅಮಾನತು ಗೊಳಿಸಿದಲ್ಲದೆ, ಇಂದು ಹಠಾತ್ತನೆ ಈತನ ವಾಹನ ತಪಾಸಣೆ ಮಾಡಿ ಇಂದು ಸಹ ದುರುದ್ದೇಶದಿಂದ ಮೆಮೋ ಬರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪದೇಪದೇ ಈತನ ವಾಹನ ತಪಾಸಣೆ ಮಾಡುವುದು ಹಾಗೂ ಇವರಿಬ್ಬರ ಮಧ್ಯೆ ಮಾತಿನ ವಾಗ್ವಾದ ನಡೆಯುವುದು ಬಳಿಕ ವೈಯುಕ್ತಿಕ ದ್ವೇಷ ಬೆಳೆಸಿಕೊಂಡು ಹಿರೇಮಠ್ ಅವರು ಈ ರೀತಿ ನಡೆದುಕೊಳ್ಳುವುದು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.