ಹನೂರು : ವಿ.ಎಸ್. ದೂಡ್ಡಿ ಗ್ರಾಮದಲ್ಲಿ ಸ್ಮಶಾನ ವಿಲ್ಲದೆ ಖಾಸಗಿ ಜಮೀನಿನ ಮಾಲೀಕರನ್ನು ಗೋಗರೆದು ಅಂತ್ಯಕ್ರಿಯೆ ಮಾಡಬೇಕೂ ಎಂಬ ಬಗ್ಗೆ ವಿಜಯಪಥ.ಇನ್ ಆನ್‌ಲೈನ್ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸ್ಮಶಾನ ಮಂಜೂರು ಮಾಡಲು ಸ್ಥಳ ಪರಿಶೀಲನೆ ಮಾಡಿದ್ದಾರೆ.
ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಎಸ್. ದೊಡ್ಡಿ ಗ್ರಾಮದಲ್ಲಿ ರಾಚಶೆಟ್ಟಿ ಎಂಬುವರು ನಿನ್ನೆ (ಸೋಮವಾರ) ನಿಧನರಾಗಿದ್ದರು. ಆ ವೇಳೆ ಅವರ ಅಂತ್ಯಕ್ರಿಯೆ ನಡೆಸಲು ಸ್ಮಶಾನವಿಲ್ಲದೆ ಮೃತನ ಕುಟುಂಬದವರು ಪರದಾಡಿದರು.
ಇನ್ನು ಬೇರೆ ದಾರಿ ಕಾಣದೆ ಖಾಸಗಿ ಜಮೀನು ಮಾಲೀಕ ವೆಂಕಟೇಶ್ ಎಂಬುವರನ್ನು ತಮ್ಮ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಗೋಗರೆದ ಬಳಿ ಅವರು ಅಂತ್ಯಕ್ರಿಯೆಗೆ ಒಪ್ಪಿಗೆ ನೀಡಿದರು.
ಸ್ಮಶಾನವಿಲ್ಲದ ಗ್ರಾಮ: ಶವಸಂಸ್ಕಾರಕ್ಕಾಗಿ ಜಮೀನು ಮಾಲೀಕನ ಅಂಗಲಾಚಿ ಅಂತ್ಯಕ್ರಿಯೆ ಮಾಡಿದ ಬಡಕುಟುಂಬ ಎಂಬ ಸುದ್ದಿ ವಿಜಯಪಥ.ಇನ್ ಆನ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಹನೂರು ತಹಸೀಲ್ದಾರ್ ಆನಂದಯ್ಯ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ (ಅ.11) ಗ್ರಾಮಕ್ಕೆ ಭೇಟಿ ನೀಡಿ ಸ್ಮಶಾನಕ್ಕೆ ಸೂಕ್ತ ಸ್ಥಳವನ್ನು ಪರಿಶೀಲಿಸಿದ್ದಾರೆ.
ಈ ಬಗ್ಗೆ ರಾಜಸ್ವ ನಿರೀಕ್ಷಕ ಮಾದೇಶ್ ಪ್ರತಿಕ್ರಿಯಿಸಿ ಹುತ್ತೂರು ವ್ಯಾಪ್ತಿಯ ಸರ್ವೆ ನಂಬರ್ 15 ಹಾಗೂ 16ರ ಸರ್ಕಾರಿ ಜಮೀನನ್ನು ಸ್ಮಶಾನಕ್ಕೆ ಗುರುತಿಸಲಾಗಿದ್ದು ಕಂದಾಯ ಇಲಾಖೆಯ ದಾಖಲೆ ಸರ್ವೆ ದಾಖಲೆಗಳ ಪರಿಶೀಲಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಇನ್ನೆರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.