ಮೈಸೂರು: ಒಕ್ಕಲಿಗರ ಬಗ್ಗೆ ನಾಲಿಗೆ ಹರಿ ಬಿಟ್ಟಿದ್ದ ಪ್ರಗತಿಪರ ಚಿಂತಕ ಪ್ರೊ ಕೆ.ಭಗವಾನ್ ಅವರಿಗೆ ಸಂಕಷ್ಟ ಎದುರಾಗಿದ್ದು ಅವರ ವಿರುದ್ಧ ಒಕ್ಕಲಿಗ ಸಮಾಜ ಸಿಡಿದೆದ್ದಿದೆ. ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು, ಈ ಸಂಬಂಧ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ ನಡೆದ ಮಹಿಷ ದಸರಾದಲ್ಲಿ ಒಕ್ಕಲಿಗರು ಸಂಸ್ಕೃತಿ ಹೀನರೆಂದು ಕುವೆಂಪು ಹೇಳಿದ್ದರು ಎಂದು ಸಭಾ ವೇದಿಕೆಯಲ್ಲಿ ಭಗವಾನ್ ಹೇಳಿದ್ದರು. ಇದನ್ನು ವಿರೋಧಿಸಿದ ಮೈಸೂರು- ಚಾಮರಾಜನಗರ ಒಕ್ಕಲಿಗರ ಸಂಘದ ಮುಖಂಡರು ಭಗವಾನ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕುವೆಂಪುನಗರದ ಭಗವಾನ್ ನಿವಾಸಕ್ಕೆ ಮುತ್ತಿಗೆ ಹಾಕಿದ ಒಕ್ಕಲಿಗ ಸಮುದಾಯದ ಮುಖಂಡರು ಭಗವಾನ್ ಅವರು ಮಹಿಷಾ ದಸರಾ ವೇದಿಕೆಯಲ್ಲಿ ಸಮುದಾಯದ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ. ಇದೇ ಮೊದಲಲ್ಲ ಈ ಹಿಂದೆಯೂ ಸಹ ಸಮುದಾಯ ಹಾಗೂ ಸಂಸ್ಕೃತಿಯ ಭಾವನೆ ಕೆರಳುವ ಹೇಳಿಕೆ ನೀಡಿ ಇದೇ ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಇದಾಗಿಯೂ ಅವರು ಹೇಳಿಕೆ ಮುಂದುವರೆಸಿದ್ದಾರೆ.
ಈ ಹಿಂದಿನ ಪ್ರಕರಣದಲ್ಲಿಯೇ ಬಂಧನ ಮಾಡಿದ್ದರೆ ಅವರು ಮತ್ತೆ ಅಂತಹ ಹೇಳಿಕೆ ಕೊಡುತ್ತಿರಲಿಲ್ಲ. ಹೀಗಾಗಿ ಈ ಕೂಡಲೇ ಅವರನ್ನು ಬಂಧಿಸಬೇಕು. ಮತ್ತೊಬ್ಬರ ಭಾವನೆಗೆ ಧಕ್ಕೆಯುಂಟು ಮಾಡುವ ಭಗವಾನ್ ಹಾಗೂ ಪ್ರೊ.ಮಹೇಶ್ ಚಂದ್ರ ಗುರು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಹಾಗೂ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಅವರ ಮನೆಯ ಮುತ್ತಿಗೆಗೆ ಯತ್ನಿಸಿದ ನೂರಾರು ಮಂದಿಯನ್ನು ಪೊಲೀಸರು ತಡೆದು ಬಂಧಿಸಿದರು. ಈ ವೇಳೆ ಕೆಲ ಕಾಲ ರಸ್ತೆ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್, ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಗಿರೀಶ್, ಚೇತನ್, ಮುಖಂಡರಾದ ಸತೀಶ್ ಗೌಡ, ಸ್ಚರೂಪ್ ಮೊದಲಾದವರು ಉಪಸ್ಥಿತರಿದ್ದರು.
ಇನ್ನೊಂದೆಡೆ ಒಕ್ಕಲಿಗ ಸಮಾಜದಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸುದ್ದಿಗೋಷ್ಠಿ ಕರೆದ ಮಹಿಷಾ ದಸರಾ ಉಪಸಮಿತಿ ಅಧ್ಯಕ್ಷ ಪುರುಷೋತ್ತಮ್ ಅವರು, ಪ್ರೊ.ಭಗವಾನ್ ಅವರ ಹೇಳಿಕೆ ಅವರ ವೈಯುಕ್ತಿಕ ಹೇಳಿಕೆಯಾಗಿದ್ದು ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಒಕ್ಕಲಿಗ ಸಮುದಾಯಕ್ಕೆ ನೋವಾಗಿದ್ದರೆ ಅದಕ್ಕೆ ವಿಷಾಧಿಸುತ್ತೇವೆಂದು ಹೇಳಿದ್ದಾರೆ.
ಕುವೆಂಪು ಅವರ ಕಾಲಘಟ್ಟದಲ್ಲಿ ದಾಖಲಾದ ಹೇಳಿಕೆಯನ್ನು ಈಗಿನ ಕಾಲಘಟ್ಟದಲ್ಲಿ ಹೇಳುವುದು ಸಮಂಜಸವಲ್ಲ. ಅದು ಅಂದಿನ ಕಾಲಘಟಕ್ಕೆ ಸರಿ ಹೋಗುತ್ತದೆ. ಕಾರ್ಯಕ್ರಮಕ್ಕೂ ಮೊದಲು ಸಹ ಯಾವುದೇ ಸಮುದಾಯದ ಬಗ್ಗೆ ತಿಳಿಸಿದ್ದೆವು. ಇದಾಗಿಯೂ ಅವರು ಮಾತನಾಡಿದ್ದು, ಅದು ಅವರ ವೈಯುಕ್ತಿಕ ಹೇಳಿಕೆಯಾಗಿದ್ದು, ಅದಕ್ಕೂ ಸಮಿತಿಗೂ ಯಾವುದೇ ಸಂಬಂಧವಿಲ್ಲವೆಂದರು. ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಇತಿಹಾಸವನ್ನು ತಿಳಿಸಿಕೊಡುವ ಕೆಲಸವನ್ನು ಪ್ರೊ.ಭಗವಾನ್ ಅವರು ಮಾಡಲಿ. ಅಂತೆಯೇ ಸಮುದಾಯವು ಸಹ ಪ್ರತಿಭಟನೆ ಕೈ ಬಿಡಲಿ ಎಂದು ಕೇಳಿಕೊಳ್ಳುವುದಾಗಿ ಹೇಳಿದ್ದಾರೆ.