ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಇಂದು ಮತ್ತೊಂದು ವಿಚಿತ್ರ ಘಟನೆಗೆ ಸಾಕ್ಷಿಯಾಯಿತು. ಸಿಎಂ ಬಿಎಸ್ವೈ ವಿರುದ್ಧ ಪ್ರತಿಭಟನೆ ಮಾಡುವ ವೇಳೆ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರು ಸದನದಲ್ಲಿ ಅಂಗಿ ಬಿಚ್ಚಿದ್ದರು. ಇದನ್ನು ಕಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದರು.
ವಿಧಾನಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಕುರಿತಾದ ಚರ್ಚೆ ನಡೆಯುತ್ತಿದ್ದರೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್ ಸಿಎಂ ಯಡಿಯೂರಪ್ಪ ವಿರುದ್ಧ ವೈಯಕ್ತಿಕ ವಿಚಾರಗಳ ಬಗ್ಗೆ ಆರೋಪ ಮಾಡಿ ಪ್ರತಿಭಟನೆ ಮಾಡುವ ಭರದಲ್ಲಿ ಶರ್ಟ್ ಬಿಚ್ಚಿದ್ದರು. ಅವರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮೊದಲಿಗೆ ಕಲಾಪವನ್ನು 15 ನಿಮಿಷ ಮುಂದೂಡಿದರು.
ಮತ್ತೆ ಸದನ ಸೇರುತ್ತಿದ್ದಂತೆ ಸಂಗಮೇಶ್ ಅವರು ಅಗೌರವದಿಂದ ನಡೆದುಕೊಂಡಿರುವುದರ ವಿರುದ್ಧ ಪ್ರಸ್ತಾಪ ಮಂಡಿಸಲಾಯಿತು. ಧ್ವನಿಮತದ ಮೂಲಕ ಪ್ರಸ್ತಾವನೆಗೆ ಒಪ್ಪಿಗೆ ಪಡೆದ ಕಾಗೇರಿಯವರು ಸಭ್ಯತೆ ಮತ್ತು ಗೌರವದಿಂದ ನಡೆದುಕೊಂಡಿರದ ಅವರನ್ನು ಒಂದು ವಾರದ ಕಾಲ ಸದನದಿಂದ ಹೊರಹಾಕಿದರು.
ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಿಯಮಾವಳಿಗಳ ನಿಯಮ 348ನೇ ಕಲಂ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮಾ. 12 ರವರೆಗೆ ಸಂಗಮೇಶ್ವರ ಅವರು ಸದನಕ್ಕೆ ಹಾಜರಾಗುವುದಕ್ಕೆ ತಡೆ ನೀಡಿ ಇದು ಇತರ ಶಾಸಕರಿಗೂ ಎಚ್ಚರಿಕೆ ಗಂಟೆಯಾಗಿದೆ.