ಬೆಂಗಳೂರು: 1997ರಲ್ಲಿ ಸಿದ್ದರಾಮಯ್ಯನವರ ಆಗ್ರಹದ ಮೇರೆಗೆ ಭೂ ಡಿನೋಟಿಫಿಕೇಷನ್ ಮಾಡಿದ್ದು, ಬಳಿಕ 1998ರಲ್ಲಿ ಅಂದು ಉಪಮುಖ್ಯಮಂತ್ರಿಯಾಗಿದ್ದಾಗ 10 ಗುಂಟೆಗಳನ್ನು ಅಕ್ರಮವಾಗಿ ಖರೀದಿಸಿ ಮನೆ ನಿರ್ಮಿಸಿ ಮಾರಾಟ ಮಾಡಿದ್ದರು ಎಂದು ಆರೋಪಿಸಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದಿಂದ ಪಿಟಿಷನರ್ ಪರ ವಕೀಲರು ಹಿಂದೆ ಸರಿದಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಆರ್‌ಟಿಐ ಕಾರ್ಯಕರ್ತ ಗಂಗರಾಜು ಎಂಬುವರು ಪಿಟಿಷನ್ ( ಕೇಸ್ ನಂ: 8814/2021) ಹಾಕಿದ್ದು ಗಂಗರಾಜು ಪರ ವಕೀಲರಾದ ಶಿವರಾಜು ಎಚ್.ಬಿ. ರಾಂ ಲಾಲ್ ರಾಯ್ ಅವರು ವಕಾಲತ್ತು ವಹಿಸಿದ್ದರು. ಆದರೆ, ಕೆಲ ಕಾರಣದಿಂದ ವಕೀಲರು ಎನ್‌ಒಸಿಕೊಡುವ ಮೂಲಕ ಈ ಪ್ರಕರಣದಿಂದ ಹೊರಬಂದಿದ್ದಾರೆ.
ಮೈಸೂರಿನ ವಿಜಯನಗರದ ಎರಡನೇ ಬಡಾವಣೆಯಲ್ಲಿರುವ ಸ.ನಂ 70/4ಎ ರಲ್ಲಿ ಸಿದ್ದರಾಮಯ್ಯ ಅವರು 10 ಗುಂಟೆ ಎಂಡಿಎ ನಿವೇಶನ ಡಿನೋಟಿಫೈ ಮಾಡಿ ಅಕ್ರಮವಾಗಿ ಮನೆ ನಿರ್ಮಿಸಿ ಅದನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಗಂಗರಾಜು ಅವರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ಆದರೆ, ಈ ಕುರಿತಂತೆ ಅಂದು ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಹೀಗಾಗಿ 2021ರಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ನ್ಯಾಯಪೀಠ ಕ್ಲೀನ್ ಚಿಟ್ ನೀಡಿತ್ತು. ಇದ್ದನ್ನು ಗಂಗರಾಜು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ.
ಇದಕ್ಕೂ ಹಿಂದೆ ಅಕ್ರಮ ಡಿನೋಟಿಫಿಕೇಷನ್ಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ರದ್ದುಗೊಳಿಸಿ ಹೈಕೋರ್ಟ್ ಕೂಡ ಆದೇಶಿಸಿತ್ತು.
ಅಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಕುರಿತಂತೆ ತಮ್ಮ ವಿರುದ್ಧ ಹೊರಡಿಸಲಾಗಿರುವ ಸಮನ್ಸ್ ರದ್ದು ಕೋರಿ ಸಿದ್ದರಾಮಯ್ಯ ಅವರು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ನ್ಯಾಯಪೀಠ, ಸಮನ್ಸ್ ರದ್ದುಗೊಳಿಸಿ ಆದೇಶ ನೀಡಿತ್ತು.
ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು ಗಂಗರಾಜು. ಈ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ತ್ರಿಸದಸ್ಯ ನ್ಯಾಯಪೀಠ ವಾದ ಪ್ರತಿವಾದ ಆಲಿಸಿದ ಬಳಿಕ ಅರ್ಜಿ ವಜಾಗೊಳಿಸಿತ್ತು. ತ್ರಿಸದಸ್ಯ ನ್ಯಾಯಪೀಠ ಅರ್ಜಿ ವಜಾಗೊಳಿಸಿರುವುದು ಪ್ರಶ್ನಿಸಿ 2021 ರಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
ಈ ಕೇಸ್ ನಂ: 8814/2021ರ ಪ್ರಕರಣ ಸಂಬಂಧ ವಕಾಲತ್ತು ವಹಿಸಿರುವ ಶಿವರಾಜು ಎಚ್.ಬಿ., ರಾಮ್ ಲಾಲ್ ರಾಯ್ ಅವರು ಎನ್‌ಒಸಿ ಕೊಡುವ ಮೂಲಕ ಕೇಸ್‌ನಿಂದ ಹಿಂದೆ ಸರಿದಿದ್ದಾರೆ.