ಚಿತ್ರದುರ್ಗ: ಫೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿರುವ ಶಿವಮೂರ್ತಿ ಮುರುಘಾ ಶರಣರ (ಮುರುಘಾಶ್ರೀ) ನ್ಯಾಯಾಂಗ ಬಂಧನವನ್ನು ಮತ್ತೆ ಕೋರ್ಟ್ ವಿಸ್ತರಿಸಿದ್ದು, ನವೆಂಬರ್ 3ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.
ಮತ್ತೊಂದೆಡೆ ಚಿತ್ರದುರ್ಗ ಮುರುಘಾಮಠದ ದತ್ತು ಕೇಂದ್ರದಲ್ಲಿರುವ ನಾಲ್ವರು ಬಾಲಕಿಯರು, ಐವರು ಬಾಲಕರು ಸೇರಿ 9ಜನ ಮಕ್ಕಳನ್ನು ಬೆಂಗಳೂರಿನ ಸರ್ಕಾರಿ ದತ್ತು ಕೇಂದ್ರಕ್ಕೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ.
ಚಿತ್ರದುರ್ಗ ಮುರುಘಾಮಠದ ಆವರಣದಲ್ಲಿನ ಈ ಮಡಿಲು ದತ್ತು ಕೇಂದ್ರದಲ್ಲಿ 9 ಮಕ್ಕಳು ಇದ್ದು ಅವರೆಲ್ಲ ಆರು ವರ್ಷದೊಳಗಿರುವವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮಕ್ಕಳನ್ನು ಸ್ಥಳಾಂತರಿಸುವುದಕ್ಕೆ ಸಿದ್ಧತೆ ನಡೆದಿದೆ.
ಮಡಿಲು ದತ್ತು ಕೇಂದ್ರದಲ್ಲಿ ಇಬ್ಬರು ಬಾಲಕಿಯರ ಮಾಹಿತಿ ದಾಖಲಿಸದ ಹಿನ್ನೆಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಲ್ಕೂವರೆ ವರ್ಷದ ಬಾಲಕಿ ಮತ್ತು 17ವರ್ಷದ ಬಾಲಕಿ ಮಾಹಿತಿಯನ್ನು ದಾಖಲಿಸಿರಲಿಲ್ಲ.
ಪೊಲೀಸರ ತನಿಖೆ ವೇಳೆ ಬಾಲಕಿಯರು ಪತ್ತೆಯಾಗಿದ್ದರು. ಹೀಗಾಗಿ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಬಗ್ಗೆ ದೂರು ದಾಖಲಿಸಿದ್ದು ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿತ್ರದುರ್ಗದ ದತ್ತು ಕೇಂದ್ರದಲ್ಲಿರುವ ಮಕ್ಕಳನ್ನು ಸ್ಥಳಾಂತರಿಸಲು ಮುಂದಾಗಿದೆ.
ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲು: ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಚಿತ್ರದುರ್ಗದ ಮುರುಘಾಶ್ರೀ ಸೇರಿ ನಾಲ್ವರ ವಿರುದ್ಧ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಕೇಸ್ ದಾಖಲಾಗಿದೆ. A1 ಮುರುಘಾಶ್ರೀ, A2 ಮಠದ ಕಾರ್ಯದರ್ಶಿ ಪರಮಶಿವಯ್ಯ, 3ನೇ ಆರೋಪಿ ಮುರುಘಾ ಮಠದ ಹಾಸ್ಟೆಲ್ನ ಲೇಡಿ ವಾರ್ಡನ್, A4 ಮಡಿಲು ದತ್ತು ಕೇಂದ್ರದ ಮುಖ್ಯಸ್ಥೆ ವೀಣಾ ವಿರುದ್ಧ ಪ್ರಕರಣ ದಾಖಲಾಗಿದೆ.