ಬೆಂಗಳೂರು: ರಾಜ್ಯದ ರಾಜಧಾನಿಯ ಹೃದಯಮಿಡಿತವೇ ಆಗಿರುವ ಬಿಎಂಟಿಸಿ ಸದ್ಯ ಕಳೆದ ಆರು ತಿಂಗಳ ಹಿಂದಿನಿಂದಲೂ ಪರಿಸರ ಸ್ನೇಹಿಯಾಗ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಗಳು ಸಾರ್ವಜನಿಕರ ಸೇವೆಯಲ್ಲಿ ನಿರತವಾಗಿವೆ.
ಇನ್ನುಈ ವರ್ಷಾಂತ್ಯಕ್ಕೆ ಮತ್ತೂ ಸುಮಾರು 1ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಳಿಸೋ ಪ್ಲಾನ್ ಮಾಡಿಕೊಂಡಿದೆ. ಅದರೇ ಪರಿಸರ ಸ್ನೇಹಿ ಬಸ್ ಸೇವೆಗೆ ಬಿಎಂಟಿಸಿ ನೌಕರರು ಮಾತ್ರ ಆತಂಕಗೊಂಡಿದ್ದಾರೆ.. ಇದು ಸರ್ಕಾರದ ಹುನ್ನಾರ ಅಂತಾ ಶಪಿಸುತ್ತಿದ್ದಾರೆ.
ಹೌದು! ಸಿಲಿಕಾನ್ ಸಿಟಿ ಜನರ ಜೀವನಾಡಿಯಾಗಿರುವ ಬಿಎಂಟಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‍ಗಳ ಕಡೆ ಮುಖ ಮಾಡಿದೆ. ಇದು ಉತ್ತಮ ಬೆಳೆವಣಿಗೆಯೇ ಸರಿ. ಆದರೆ, ಈ ಎಲೆಕ್ಟ್ರಿಕ್ ಬಸ್‌ಗಳ ಹೆಸರಿನಲ್ಲಿ ಬಿಎಂಟಿಸಿಯನ್ನು ಸರ್ಕಾರ ಖಾಸಗೀಯವರಿಗೆ ವಹಿಸುತ್ತಿದ್ದು, ಆ ಖಾಸಗಿಯವರು ಸಂಸ್ಥೆ ಚಾಲಕರಿಗೆ ಕೋಕ್‌ಕೊಟ್ಟು ಖಾಸಗಿ ಚಾಲಕರ ನೇಮಕ ಮಾಡಿಕೊಂಡಿದೆ, ಇದರಿಂದ ನೌಕರರು ಆತಂಕಗೊಳ್ಳುತ್ತಿದ್ದಾರೆ.
ಈಗಾಗಲೇ ಬಿಎಂಟಿಸಿಯಲ್ಲಿ 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಗಳು ಸಾರ್ವಜನಿಕರ ಸೇವೆ ಮಾಡುತ್ತಿವೆ. ಇನ್ನು ಈ ವರ್ಷದ ಅಂತ್ಯದ ವೇಳೆಗೆ ಹೊಸದಾಗಿ 921 ಇವಿ ಬಸ್‍ಗಳನ್ನು ರಸ್ತೆಗೆ ಇಳಿಸುವ ಯೋಜನೆಯನ್ನ ಬಿಎಂಟಿಸಿ ಹೊಂದಿದೆ.
ಈ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‍ಗಳಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ಆದರೆ ಇದರಿಂದ ನೌಕರರಿಗೆ ಕೋಕ್ ಕೊಡುವುದು ಶುರುವಾಗಿದೆ. ಇನ್ನೊಂದು ಕಡೆ ಹೊಸ ಬಸ್‌ಗಳು ಬರ್ತಿವೆ. ಹಳೆಯ ಡಿಸೇಲ್ ಬಸ್‍ಗಳ ಗತಿಯೇನು ಅನ್ನೋ ಪ್ರಶ್ನೆ ಎದುರಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ 85 ಲಕ್ಷ ರೂಪಾಯಿ ಅನುದಾನ ನೀಡಿ ಖಾಸಗೀಕರಣ ಮಾಡ್ತಿದ್ದಾರೆ. ಎಲೆಕ್ಟ್ರಿಕ್ ಬಸ್‍ನಿಂದ ನಿಗಮದ ನೌಕರರು ಬೀದಿ ಪಾಲಾಗುತ್ತಾರೆ ಎಂಬ ಭಯ ಕಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ನಾಲ್ಕೂ ನಿಗಮಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವುದಾಗಿ ಈಗಾಗಲೇ ಸಾರಿಗೆ ಸಚಿವ ಶ್ರೀರಾಮುಲು ಕಳೆದ ಅಧಿವೇಶನದಲ್ಲೇ ಬಹಿರಂಗಪಡಿಸಿದ್ದಾರೆ.
ಈಗ ಬಿಎಂಟಿಸಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಹೆಸರಿನಲ್ಲಿ ಖಾಸಗೀಕರಣಕ್ಕೆ ಮುಂದಾಗಿದ್ದು, ಚಾಲಕರು ಮತ್ತು ಬಸ್‌ಗಳ ನಿರ್ವಹಣೆಯನ್ನು ಖಾಸಗಿಯವರಿಗೇ ವಹಿಸಲಾಗಿದೆ. ಈ ಮೂಲಕ ನೌಕರರನ್ನು ಬೀದಿಪಾಲು ಮಾಡುವ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂಬುವುದು ಕಂಡು ಬರುತ್ತಿದೆ.
ಇನ್ನು ನೌಕರರು ಹೇಳಿಕೆ ನೀಡುತ್ತಿರುವುದು ಇಷ್ಟೆ, ಪರಿಸರ ಸ್ನೇಹಿ ಬಸ್‍ಗೆ ನಮ್ಮ ವಿರೋಧವಿಲ್ಲ, ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳ ಹೆಸರಿನಲ್ಲಿ ನಮ್ಮ ನಿಗಮದ ಸಿಬ್ಬಂದಿಯನ್ನು ಬಳಸಿಕೊಳ್ಳೋ ಕೆಲಸವಾಗಬೇಕು. ಇಲ್ಲವಾದಲ್ಲಿ ಬಿಎಂಟಿಸಿ ನೌಕರರ ಬದುಕು ಅತಂತ್ರವಾಗಲಿದೆ. ಇದು ಆಗುವುದಕ್ಕೆ ನೌಕರರ ಪರ ಸಂಘಟನೆಗಳು ಬಿಡಬಾರದು ಎನ್ನುತ್ತಿದ್ದಾರೆ ನೌಕರರು.
ಎಲೆಕ್ಟ್ರಿಕ್ ಬಸ್‌ಗಳ ಸೇವೆಗೆ ಯಾರ ವಿರೋಧವೂ ಇಲ್ಲ, ಆದರೆ ಖಾಸಗೀಕರಣದ ಮೂಲಕ ಬಿಎಂಟಿಸಿಯನ್ನು ಮುಗಿಸೋ ಕೆಲಸ ನಡೆಯುತ್ತಿದೆ. ಇದರಿಂದ ನೌಕರರಿಗಷ್ಟೇ ನಷ್ಟವಾಗುವುದಿಲ್ಲ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಶಾಲೆಯ ವಿದ್ಯಾರ್ಥಿಗಳಿಗೂ ಇದರ ಬಿಸಿ ತಟ್ಟಲಿದೆ ಎಂದು ನೌಕರರ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.