ಬೆಂಗಳೂರು: ಸಂಕಷ್ಟದ ಸಮಯದಲ್ಲೂ ಜನರ ಕೈ ಹಿಡಿಯದ ಸರ್ಕಾರ ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಲೇ ಇದೆ. ವಿದ್ಯುತ್ ದರ ಏರಿಕೆ ಮಾಡಿ ಹೃದಯಹೀನರಂತೆ ಮುಖ್ಯಮಂತ್ರಿ ಯಡಿಯೂರಪ್ಪ ವರ್ತಿಸುತ್ತಿದ್ದಾರೆ. ಹೀಗಾಗಿ ವಿದ್ಯುತ್ ದರ ಏರಿಕೆ ವಿರುದ್ದ ಆಮ್ ಆದ್ಮಿ ಪಕ್ಷ ಶಾಕ್ ಬೇಡಾ- ಕಡಿಮೆ ಮಾಡಿ ಇಲ್ಲದಿದ್ದರೆ ಖುರ್ಚಿ ಖಾಲಿ ಮಾಡಿ” ಎನ್ನುವ ಘೋಷ ವಾಕ್ಯದೊಂದಿಗೆ ಬೃಹತ್ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಎಚ್ಚರಿಕೆ ನೀಡಿದರು.
ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ʼಶಾಕ್ ಬೇಡʼ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದರು.
ಎಎಪಿ “ಶಾಕ್ ಬೇಡ” ಎನ್ನುವ ನೂತನ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ್ದು, ಇದರಲ್ಲಿ ಕಳೆದ ತಿಂಗಳು ಬೆಂಗಳೂರಿನ ಜನರು ಪಾವತಿಸಿದ ವಿದ್ಯುತ್ ಬಿಲ್ ಮೊತ್ತವನ್ನು ನಮೂದಿಸಿ ನವೆಂಬರ್ ತಿಂಗಳು ಎಷ್ಟು ವಿದ್ಯುತ್ ಬಿಲ್ ಬರುತ್ತದೆ ಎಂದು ನೋಡಬಹುದು ಮತ್ತು ಅಷ್ಟೇ ಪ್ರಮಾಣದ ವಿದ್ಯುತ್ ಉಪಯೋಗಿಸುವ ದೆಹಲಿಯ ನಿವಾಸಿಗಳು ಎಷ್ಟು ಬಿಲ್ ಪಾವತಿಸುತ್ತಾರೆ ಎನ್ನುವುದನ್ನು ತುಲನೆ ಮಾಡಿ ನೋಡಬಹುದು ಎಂದು ಹೇಳಿದರು.
ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದೀಪಾವಳಿಯ ನಂತರ ಬೆಂಗಳೂರಿನ ಮನೆ ಮನೆಗೆ ತೆರಳಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಹಿಂದಿನ ಸರ್ಕಾರಗಳ ದುಷ್ಕೃತ್ಯಗಳು ಮತ್ತು ಭ್ರಷ್ಟಾಚಾರಗಳ ಬಗ್ಗೆ ಜನರಿಗೆ ತಿಳಿಸಲಿದ್ದಾರೆ ಎಂದರು.
ವಿದ್ಯುತ್ ಸೋರಿಕೆ, ಕಳ್ಳತನ, ತಡೆಗಟ್ಟದೆ ಆ ಹೊರೆಯನ್ನು ಜನರ ಮೇಲೆ ಹಾಕಿದ ಎಲ್ಲಾ 3 ಪಕ್ಷಗಳು ಇಂದಿನ ಈ ಪರಿಸ್ಥಿತಿಗೆ ಕಾರಣ. ಈ ಕೂಡಲೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಅವೈಜ್ಞಾನಿಕ ದರ ಹೆಚ್ಚಳದ ಆದೇಶವನ್ನು ಈ ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದರು.
ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಉಪಾಧ್ಯಕ್ಷ ಸುರೇಶ್ ರಾಥೋಡ್, ಮುಖ್ಯ ವಕ್ತಾರ ಶರತ್ ಖಾದ್ರಿ, ಜ್ಯೋತಿಷ್, ಮುಖಂಡರಾದ ಪ್ರಕಾಶ್ ನೆಡಂಗಡಿ, ಶಾಷವಲಿ ಇದ್ದರು.