ಕಲಬುರಗಿ : 100 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಆಸ್ತಿಯನ್ನು ಪರಭಾರೆಮಾಡಿದ್ದಲ್ಲಿ ಅದನ್ನು ನೋಂದಣಿ ಮಾಡಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರಾಯಚೂರು ಜಿಲ್ಲೆಯ ಯೆಗನೂರು ಗ್ರಾಮದ ನಿವಾಸಿ ಗಂಗಪ್ಪ ಗುಲಿಗಪ್ಪ ಎಂಬುವರು ಅದೇ ಗ್ರಾಮದ ಲಿಂಗರೆಡ್ಡಿ ಹನುಮಪ್ಪ ಎಂಬುವರ ವಿರುದ್ಧ ತಮ್ಮ ಆಸ್ತಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಸಿಕೊಂಡಿದ್ದಾರೆ. ಹೀಗಾಗಿ ತಮ್ಮ ಆಸ್ತಿಯನ್ನು ತಮ್ಮ ವಶಕ್ಕೆ ಹಿಂದಿರುಗಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ . ಸಚ್ಚಿನ್ ಶಂಕರ್ ಮಗದಂ ಅವರಿದ್ದ ಕಲಬುರಗಿ ಹೈಕೋರ್ಟ್ ಪೀಠ, ಪರಭಾರೆಯಾದ ಆಸ್ತಿಯನ್ನು ಹಸ್ತಾಂತರ ಮಾಡಿದ್ದು ಆ ಆಸ್ತಿಯನ್ನು ಅಂದು ಪಡೆದವರೆ ಅನುಭವಿಸಿಕೊಂಡು ಬರುತ್ತಿರುವುದೇ ಸಾಕಾಗುತ್ತದೆ ಎಂದು ಅಭಿಪ್ರಾಯ ಪಟ್ಟು ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಜಮೀನು ಹಸ್ತಾಂತರದಲ್ಲಿ ಎರಡು ಪ್ರಕ್ರಿಯೆಗಳಿದ್ದು, ಮೊದಲನೆಯದಾಗಿ ನೋಂದಣಿ ಮಾಡುವ ಮೂಲಕ, ಮತ್ತೊಂದು ಆಸ್ತಿಯ ಸ್ವಾಧೀನ ಹಕ್ಕನ್ನು ಹಸ್ತಾಂತರಿಸುವ ಮೂಲಕವಾಗಿದೆ. ಮೊದಲ ಅಂಶ ಎಲ್ಲ ಸಂದರ್ಭ ಗಳಲ್ಲಿಯೂ ವರ್ಗಾವಣೆ ಮಾಡುವುದಾಗಿದೆ. ಎರಡನೆಯ ಅಂಶ ಆಸ್ತಿ ವರ್ಗಾವಣೆ ಕಾಯಿದೆಯ ಸೆಕ್ಷನ್ 54ರ ಪ್ರಕಾರ ಸರಳ ವ್ಯವಸ್ಥೆಯಾಗಿದೆ.
ಆದರೆ, ಈ ಪ್ರಕರಣ 1963ರಲ್ಲಿ ನಡೆದಿರುವುದಕ್ಕೆ ಸಂಬಂಧಿಸಿದ್ದಾಗಿದ್ದು, ಜಮೀನು ಹಸ್ತಾಂತರ ಮಾಡಲಾಗಿದೆ. ಆದರೆ, ನೋಂದಣಿಯಾಗಿಲ್ಲ. ಹೀಗಾಗಿ ನೋಂದಣಿ ಮಾಡದಿದ್ದರೂ ಆಸ್ತಿ ಹಸ್ತಾಂತರ ಪಡೆದವರದ್ದಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ರಾಯಚೂರು ಜಿಲ್ಲೆಯ ಯೆಗನೂರು ಗ್ರಾಮದ ನಿವಾಸಿ ಗಂಗಪ್ಪ ಎಂಬುವರು ತನ್ನ ತಾಯಿಯ ಅಜ್ಜನಿಗೆ ಸೇರಿದ ಜಮೀನನ್ನು ಅದೇ ಗ್ರಾಮದ ಲಿಂಗಾರೆಡ್ಡಿ ಎಂಬುವರು ಸುಳ್ಳು ದಾಖಲೆಗಳನ್ನು ಸಿದ್ದಪಡಿಸಿಕೊಂಡು ತನ್ನದೆಂದು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ತಮ್ಮ ಆಸ್ತಿ ಹಿಂದಿರುಗಿಸಲು ನಿರ್ದೇಶಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ಅದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಲಿಂಗಾರೆಡ್ಡಿ ನಮ್ಮ ತಂದೆಯವರು ಗಂಗಪ್ಪ ನವರ ತಾತನಿಂದ 1963ರ ನವೆಂಬರ್ 14ರಂದು 95 ರೂಪಾಯಿಗಳಿಗೆ ಜಮೀನನ್ನು ಖರೀದಿಸಿದ್ದಾರೆ ಎಂಬುದಾಗಿ ದಾಖಲೆಗಳೊಂದಿಗೆ ತಿಳಿಸಿದ್ದರು. ಜತೆಗೆ, ನಂತರ 1973ರಲ್ಲಿ ವಿಲ್ಮಾಡಿ ಆಸ್ತಿಯನ್ನು ನಮಗೆ ಬಿಟ್ಟು ಕೊಟ್ಟಿದ್ದರು. ಆದರೆ, ಆಸ್ತಿಯ ಮೌಲ್ಯ 100 ರೂಪಾಯಿಗಳಿಗೂ ಕಡಿಮೆಯಿದ್ದ ಪರಿಣಾಮ ನೋಂದಣಿ ಮಾಡಿರಲಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಹೈಕೋರ್ಟ್ ಪೀಠದ ಆದೇಶ?: ವಾದ – ಪ್ರತಿವಾದ ಆಲಿಸಿದ ನ್ಯಾ ಯಪೀಠ, ಈ ಪ್ರ ಕರಣದಲ್ಲಿ 100 ರೂಪಾಯಿಗಳಿಗೂ ಕಡಿಮೆ ಬೆಲೆಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ದಾಖಲೆಗಳ ನೋಂದಣಿ ಆಗದಿದ್ದರೂ ಆಸ್ತಿಯನ್ನು ಹಸ್ತಾಂತರ ಮಾಡಲಾಗಿದೆ. ಹೀಗಿರುವಾಗ ನೋಂದಣಿಯಾಗಿಲ್ಲ ಎಂಬ ಕಾರಣ ನೀಡಿ ಆಸ್ತಿಯನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಅಲ್ಲದೆ, ಜಮೀನು ಮಾರಾಟ ಮಾಡಿರುವುದು ಕಾನೂನು ಬದ್ಧವಾಗಿದೆ. 1963ರಲ್ಲಿ ಈ ಪ್ರಕ್ರಿಯೆ ನಡೆಸಿದ್ದು ಈ ಆಸ್ತಿಯನ್ನು ವರ್ಗಾವಣೆ ಮಾಡಿದ್ದು, ಸ್ವಾಧೀನವನ್ನು ಬಿಟ್ಟು ಕೊಟ್ಟಿರುವುದು ದೃಢಪಟ್ಟಿದೆ. ಜತೆಗೆ, ನೋಂದಣಿಯಾಗದ ಮಾರಾಟ ಒಪ್ಪಂದದ ಪ್ರತಿಯೂ ಇದೆ. ಹೀಗಾಗಿ ಜಮೀನು ಲಿಂಗಾರೆಡಿಗೆ ಸೇರಿದ್ದು ಎನ್ನುವುದಕ್ಕೆ ಈ ಅಂಶ ಸಾಕಾಗಿದೆ. ಅದರ ಜತೆಗೆ, 100 ರೂಪಾಯಿಗಳಿಗೂ ಕಡಿಮೆ ಬೆಲೆಗೆ ಪರಭಾರೆಯಾದರೆ ಆಸ್ತಿ ವರ್ಗಾವಣೆ ಕಾಯಿದೆಯ ಪ್ರಕಾರ ಕಾನೂನು ಬದ್ದವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.