ಬೆಂಗಳೂರು: ಗ್ರೂಪ್ ಸಿ ಮತ್ತು ಡಿ ವರ್ಗದ ನೌಕರರ ವರ್ಗಾವಣೆ ನಿಯಮವನ್ನು ಸರ್ಕಾರ ಸಡಿಲಿಸಿದೆ. ನಿಯೋಜನೆಯಾದ ಬಳಿಕ ನೇಮಕಗೊಂಡ ಕ್ಷೇತ್ರದಲ್ಲಿ ಏಳು ವರ್ಷಗಳ ಸೇವೆ ಸಲ್ಲಿಸಿರುವ ಪತಿ-
ಪತ್ನಿಯರಿಗೆ ಒಂದೇ ಕಡೆ ಕೆಲಸ ಮಾಡಲು ಅವಕಾಶ ಮಾಡಿಕೊಡಲು ರಾಜ್ಯ ಸಂಪುಟ ಸಭೆ ಸಮ್ಮತಿಸಿದೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ವಿಧಾನಸೌಧದಲ್ಲಿ ಮಾಹಿತಿ ನೀಡಿದರು. ಈ ಹಿಂದೆ ಸರ್ಕಾರಿ ನೌಕರರ ವರ್ಗಾವಣೆ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿತ್ತು. ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ನಿಯೋಜಿತ ಸ್ಥಳದಲ್ಲಿ ಕಡ್ಡಾಯ ಸೇವೆಗೆ ಸೂಚಿಸಿತ್ತು. ಬಳಿಕ ಅದಕ್ಕೆ ಬದಲಾವಣೆ ತಂದು ಅದನ್ನು ಏಳು ವರ್ಷಗಳಿಗೆ ಏರಿಕೆಮಾಡಿತ್ತು.
ಸೇವಾ ದೃಷ್ಟಿಯಿಂದ ಇದು ಸೂಕ್ತವೇ ಆಗಿದ್ದರೂ ಕೌಟುಂಬಿಕ ನೆಲೆಗಟ್ಟಿನಿಂದ ನೌಕರರ ಕುಟುಂಬಗಳು ಸಂಕಷ್ಟ ಪಡುವಂತಾಗಿತ್ತು. ಈ ವಿಚಾರವಾಗಿ ಸರ್ಕಾರಿ ನೌಕರರಾಗಿರುವ ಪತಿ, ಪತ್ನಿಯರು ಸರ್ಕಾರಕ್ಕೆ ಅಹವಾಲು ಸಲ್ಲಿಸಿದ್ದರು. ಈ ವಿಚಾರವನ್ನು ಮನಗಂಡಿರುವ ರಾಜ್ಯ ಸರ್ಕಾರ ಈ ನಿಯಮಕ್ಕೆ ಬದಲಾವಣೆ ತರಲು ನಿರ್ಧರಿಸಿದ್ದಾಗಿ ವಿವರಿಸಿದರು.
ಹೊಸ ವರ್ಗಾವಣೆ ಮಾನದಂಡದಂತೆ, ಸರ್ಕಾರಿ ನೌಕರರಾಗಿರುವ ಪತಿ-ಪತ್ನಿಯರು ವರ್ಗಾವಣೆ ಸಲುವಾಗಿ ಅರ್ಜಿ ಸಲ್ಲಿಸಿದಾಗ, ನಿಯೋಜಿತ ಸ್ಥಳದಲ್ಲಿ ಕನಿಷ್ಠ ಏಳು ವರ್ಷಗಳ ಸೇವಾವಧಿ ಪೂರ್ಣಗೊಳಿಸಿದ್ದರೆ ಅಂತಹವರಿಗೆ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ಮಾಡಿಕೊಡಲು ಅನುವು ಮಾಡಿಕೊಡಲಾಗುವುದು ಎಂದು ಸಚಿವರು ತಿಳಿಸಿದರು.
ಸರ್ಕಾರದ ಈ ನಿರ್ಧಾರದಿಂದ ಪ್ರಮುಖವಾಗಿ ಪೊಲೀಸ್ ಇಲಾಖೆ ಹಾಗೂ ನೇರವಾಗಿ ಸಾರ್ವಜನಿಕ ಒಡನಾಟ ಹೊಂದಿರುವ ಇತರ ಇಲಾಖೆ ಸಿಬ್ಬಂದಿಗಳಿಗೆ ಅನುಕೂಲವಾಗಲಿದ್ದು , ಅವರ ವೃತ್ತಿ ಸಂಬಂಧಿತ ಕೌಟುಂಬಿಕ ಸಮಸ್ಯೆ ಪರಿಹಾರವಾಗಲಿದೆ ಎಂದು ಸಚಿವ ಸುಧಾಕರ್ ಹೇಳಿದರು.