ಮಾಳಿಗೆಯ ಮನೆ ಕಟ್ಟಿ ಮಕ್ಕಳಿ
ಗೇಳಿಗೆಯ ಬಯಸಿದ್ದ ಜಾಣನು
ದಾಳವಾಗಿಸೆ ಜೀವಜಾಲವ ಬಾಳು ಸವಿಯೆಂದು|
ಗೋಳುಗಳ ತಾ ಹಾಸಿ ಹೊದ್ದವ
ಬಾಳಿನೊಳಗಣ ದುಃಖ ಸುಖವನು
ನಾಳೆಯೊಂದಿಗೆ ಸಹಿಸಿ ಮೆದ್ದನು ಸಹಜ ತನಗೆಂದು||
ಹೋಳಿಗೆಯ ತಾ ತಿಂದು ಬದುಕಲಿ
ಜೋಳಿಗೆಯು ತಾ ತುಂಬುಲೆನ್ನುತ
ಬಾಳ ಹಾದಿಗೆ ಬೆಳಕನೀಯುವ ಯತ್ನ ಮಾಡುತಿರಿ
ಖೂಳ ಕೃತ್ಯಕೆ ಸೊಪ್ಪು ಹಾಕದೆ
ಹಾಳು ಬಾವಿಯ ತಳದೊಡಳಗಿದ
ತಾಳ ತಪ್ಪಿದ ಮೂಳ ಮನುಜರ ಸಂಘವಾಡದಿರಿ
ಬಿತ್ತಿದಂತೆಯೆ ಬೆಳೆಯು ನಮ್ಮದು
ಸುತ್ತಿದಂತೆಯೆ ಜೇನ ಸವಿಯಿದು
ನೆತ್ತಿಗೇರದ ತೆರದಿ ಸೊಕ್ಕನು ಕಾವ ಜಾಣ್ಮೆಯಿದು|
ಎತ್ತರೆತ್ತರ ಬೆಳೆದ ನಂತರ
ಮೆತ್ತಗಾದರೆ ಬಾಳ್ವೆ ಸಹ್ಯವು
ಮೆತ್ತಿಕೊಳ್ಳುತ ನಮ್ಮೊಳೇನಿದೆಯೆಂದು ತೋರುವುದು||
ನಡೆಯಬೇಕಿದೆ ನಾವು ನಮ್ಮನು
ಪಡೆದ ತಂದೆಯ ಹಡೆದ ಮಾತೆಯ
ನುಡಿಯನಾಲಿಸಿ ಬಾಳ ಹಾದಿಗೆ ದೀಪವಾಗುತಿರಿ
ಮಡಿದು ಹೋಗುವ ಮುನ್ನ ದ್ರೋಹಕೆ
ಕೊಡೆಯ ಹಿಡಿಯದೆ ಮೋಸ ವಂಚನೆ
ಹಿಡಿದು ಸ್ವಾರ್ಥವ ಮೆರೆವ ಕೂಟಕೆ ತೆಪ್ಪವಾಗದಿರಿ
l ಶಿವೈ
ವೈಲೇಶ್ ಪಿ ಎಸ್ ಕೊಡಗು
೨೬/೦೮/೨೦೨೨