ಬೆಂಗಳೂರು: ಒಂದರಿಂದ ಪಿಯುವರೆಗೆ ಶಾಲೆ, ಕಾಲೇಜುಗಳನ್ನು ತೆರೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸೋಮವಾರ ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಸಂಬಂಧ ತಮ್ಮ ನೇತೃತ್ವದಲ್ಲಿ ಮಧ್ಯಾಹ್ನ ವಿಧಾನಸೌಧದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಶಾಲೆ ಮತ್ತು ಪಿಯು ಕಾಲೇಜುಗಳನ್ನು ಡಿಸೆಂಬರ್ ಅಂತ್ಯದ ವರೆಗೆ ತೆರೆಯದಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಎಸ್, ಸುರೇಶ್ ಕುಮಾರ್, 1 ರಿಂದ 8ನೇ ತರಗತಿಯ ವರೆಗೆ 2020-21ನೇ ಸಾಲಿನಲ್ಲಿ ಆಫ್‌ಲೈನ್ ತರಗತಿಗಳನ್ನು ಮಾಡದಿರಲು ನಿರ್ಧರಿಲಾಗಿದೆ ಎಂದು ಹೇಳಿದರು.
ಇನ್ನು ಸರ್ಕಾರ ಮತ್ತು ಆರೋಗ್ಯ ಇಲಾಖೆ ಇಂದು ನಡೆದ ಸಭೆಯಲ್ಲಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಈ ಬಾರಿ 1ರಿಂದ 8ನೇ ತರಗತಿಯ ವರೆಗೆ ಶಾಲೆ ಪುನರಾರಂಭ ಬೇಡ ಎಂದು ಸಲಹೆ ನೀಡಿದ್ದು, ಅವರ ತೀರ್ಮಾನವನ್ನು ಶಿಕ್ಷಣ ಇಲಾಖೆ ಪರಿಗಣಿಸಿದೆ. ಹೀಗಾಗಿ 1ರಿಂದ 8ನೇ ತರಗತಿಯವರೆಗೆ ಶಾಲೆಗಳಲ್ಲಿ ಕ್ಲಾಸ್ ಇರುವುದಿಲ್ಲ ಆದರೆ, ಆನ್‌ಲೈನ್‌ನಲ್ಲಿ ಪಾಠಗಳು ನಡೆಯಲಿವೆ ಎಂದು ಹೇಳಿದರು.
ಇನ್ನು 9ರಿಂದ 10ನೇ ತರಗತಿ ಮತ್ತು ಪಿಯು ತರಗತಿಗಳನ್ನು ಆಫ್‌ಲೈನ್‌ಲ್ಲಿ ಆರಂಭಿಸುವ ಬಗ್ಗೆ ಡಿಸೆಂಬರ್ 3ನೇ ವಾರದಲ್ಲಿ ಮತ್ತೆ ಸಭೆ ಸೇರಿ ಅಂದಿನ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಜೂನ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ?
ಇನ್ನು ಕಳೆದ 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೂನ್‌ನಲ್ಲಿ ನಡೆದಿತ್ತು. ಅದರಂತೆ ಈ ಬಾರಿಯೂ ಜೂನ್‌ನಲ್ಲಿ ಪರೀಕ್ಷೆ ನಡೆಸಬೇಕು ಇಲ್ಲ ಯಾವಾಗ ನಡೆಸಿದರೆ ಉತ್ತಮ ಮತ್ತು ಮಕ್ಕಳಿಗೆ ಅನುಕೂಲವಾಗುತ್ತದೆ ಎಂಬುರದ ಬಗ್ಗೆ ನಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ತೆಗದುಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.
ಜೂನ್‌ನಲ್ಲಿ ಪಿಯು ಪರೀಕ್ಷೆ
ಪಿಯು ಪರೀಕ್ಷೆಯನ್ನು ಜೂನ್‌ನಲ್ಲೇ ನಡೆಸಬೇಕೊ ಅಥವಾ ಬೇರೆ ತಿಂಗಳಿನಲ್ಎಂಲಿ ನಡೆಸಿದರೆ ಹೇಗೆ ಎಂಬುದರ ಬಗ್ಗೆಯೂ ನಿರ್ಧಾರ ತೆಗದುಕೊಳ್ಳಲಾಗುವುದು. ಇನ್ನು ಈಗಾಗಲೇ ಪಾಠಗಳನ್ನು ನಮ್ಮ ಶಿಕ್ಷಕರು ಆನ್‌ಲೈನ್ ಮಾಡುತ್ತಿದ್ದು, ಪರೀಕ್ಷೆಗೆ ತಯಾರಿಯನ್ನು ವಿದ್ಯಾರ್ಥಿಗಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಆದರೆ ಕೊರೊನಾ ಯಾವ ಮಟ್ಟದಲ್ಲಿ ಇದೆ ಎಂಬುದರ ಮೇಲೆ ಪರೀಕ್ಷೆಗಳನ್ನು ನಡೆಸುವ ಬಗ್ಗೆ ತಿಳಸಲಾಗುವುದು ಎಂದರು.
ಆರೋಗ್ಯ ಸಚಿವ ಸುಧಾಕರ್, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ , ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.