ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (89) ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ಡಾ. ಸಿ.ಎನ್. ಮಂಜುನಾಥ್ ಹೇಳಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಭಗವಾನ್ ಇಹಲೋಕ ತ್ಯಜಿಸಿದ್ದಾರೆ.
ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಎಂಬ ಹೆಸರಿದ್ದರೂ ಇವರು ಭಗವಾನ್ ಹೆಸರಿನಿಂದಲೇ ಪ್ರಸಿದ್ಧರು. ಡಾ. ರಾಜ್ ಕುಮಾರ್ ನಟನೆಯ ಬ್ಲಾಕ್ ಬಸ್ಟರ್ ಹಿಟ್ ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ಆಪರೇಶನ್ ಡೈಮಂಡ್ ರಾಕೆಟ್’, ‘ಹೊಸ ಬೆಳಕು’ ಸೇರಿದಂತೆ 55 ಚಿತ್ರಗಳನ್ನು ಸ್ನೇಹಿತ ದೊರೈ ರಾಜ್ ಜತೆ ಸೇರಿ ನಿರ್ದೇಶಿಸಿದ್ದರು.
ಇವರ ನಿರ್ದೇಶನ 30 ಚಿತ್ರಗಳಿಗೆ ಡಾ. ರಾಜ್ ನಾಯಕರಾಗಿದ್ದರು ಅನ್ನೋದು ವಿಶೇಷ ಅಷ್ಟೇ ಅಲ್ಲದೇ ಡಾ ರಾಜ್ ಕುಟುಂಬದೊಂದಿಗೆ ಆತ್ಮೀಯ ಬಾಂಧ್ಯವವನ್ನು ಹೊಂದಿದ್ದರು ಭಗವಾನ್. ಸಿನಿಮಾ ರಂಗದಲ್ಲಿ 65 ವರ್ಷಗಳ ಸುದೀರ್ಘ ಅನುಭವ ಭಗವಾನ್ ಅವರದ್ದಾಗಿತ್ತು. ಗೆಳೆಯ ದೊರೈ ನಿಧನದ ಬಳಿಕ ನಿರ್ದೇಶನದಿಂದ ಹಿಂದೆ ಸರಿದಿದ್ದರು.
ಎಸ್.ಕೆ. ಭಗವಾನ್ ಅವರು 5 ಜುಲೈ 1933 ರಂದು ಜನಿಸಿದ್ದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರು ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ಚಿಕ್ಕವಯಸ್ಸಿನಲ್ಲಿ ಹಿರಣ್ಣಯ್ಯ ಮಿತ್ರ ಮಂಡಳಿಯವರೊಂದಿಗೆ ರಂಗ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅವರು 1956 ರಲ್ಲಿ ಭಾಗ್ಯೋದಯ ಚಿತ್ರದ ಮೂಲಕ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಸಹಾಯಕರಾಗಿ ತಮ್ಮ ಚಲನಚಿತ್ರ ಜೀವನವನ್ನು ಪ್ರಾರಂಭಿಸಿದರು.
ಇತ್ತೀಚೆಗೆ ವಿನಯ್ ರಾಘವೇಂದ್ರ ರಾಜ್‌ಕುಮಾರ್ ನಾಯಕರಾಗಿದ್ದ ‘ಅನಂತು ವರ್ಸಸ್ ನುಸ್ರತ್’ ಸಿನಿಮಾದಲ್ಲಿ ಎಸ್.ಕೆ. ಭಗವಾನ್ ನಟಿಸಿದ್ದರು. ಇದಾದ ಬಳಿಕ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರು. ಪ್ರಮುಖವಾಗಿ ಪುನೀತ್ ರಾಜ್‍ಕುಮಾರ್‌ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇ ಭಗವಾನ್ ಅವರು. ಪ್ರೇಮದ ಕಾಣಿಕೆ ಚಿತ್ರದಿಂದ ಚಲನಚಿತ್ರ ರಂಗಕ್ಕೆ ಪರಿಚಯ ಮಾಡಿದ್ದರು.
ಎಸ್. ಕೆ. ಭಗವಾನ್ ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಮತ್ತು ಕಾದಂಬರಿ ಆಧಾರಿತ ಚಲನಚಿತ್ರಗಳ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು.
ಡಾ. ರಾಜ್ ಕುಮಾರ್, ಉದಯ್ ಕುಮಾರ್, ನರಸಿಂಹರಾಜು, ಲಕ್ಷ್ಮೀ, ಆರತಿ, ಜಯಂತಿ, ರಾಜೇಶ್, ಕಲ್ಪನಾ, ಮಂಜುಳಾ, ಅನಂತ್ ನಾಗ್, ಶಂಕರ್ ನಾಗ್, ಬಿ. ಸರೋಜಾ ದೇವಿ, ಡಾ. ವಿಷ್ಣುವರ್ಧನ್, ಮಾಲಾಶ್ರೀ, ಅಂಬರೀಷ್, ಪುನೀತ್ ರಾಜಕುಮಾರ್ ಹಾಗೂ ಇತರೆ ಖ್ಯಾತ ನಟರು ಮತ್ತು ನಟಿಯರ ಜತೆಗೆ ಎಸ್.ಕೆ. ಭಗವಾನ್ ಕೆಲಸ ಮಾಡಿದ್ದಾರೆ.
ಎಸ್.ಕೆ. ಭಗವಾನ್ ಸಿನಿಮಾ ರಂಗದಲ್ಲಿ 65 ವರ್ಷದ ಸುದೀರ್ಘ ಅನುಭವವನ್ನೂ ಹೊಂದಿದ್ದು, ದೊರೈರಾಜರ ಮರಣದ ನಂತರ ಎಸ್.ಕೆ. ಭಗವಾನ್ ನಿರ್ದೇಶನದಿಂದ ನಿವೃತ್ತಿ ಹೊಂದಿದ್ದರು. ’ಮಾಂಗಲ್ಯ ಬಂಧನ’ ದೊರೈ-ಭಗವಾನ್ ಜೋಡಿ ನಿರ್ದೇಶನದ ಕೊನೆಯ ಚಿತ್ರ ಎಂದು ತಿಳಿದುಬಂದಿದೆ.
ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ. 999 ಸೇರಿ ಬಾಂಡ್ ಚಲನಚಿತ್ರಗಳನ್ನು ಸ್ಯಾಂಡಲ್‌ವುಡ್‌ನಲ್ಲಿ ಆರಂಭಿಸಿದ ಕೀರ್ತಿ ಸಹ ದೊರೈ – ಭಗವಾನ್ ಜೋಡಿಗೆ ಸಲ್ಲುತ್ತದೆ. ಎಸ್.ಕೆ. ಭಗವಾನ್ ಆದರ್ಶ ಫಿಲಂ ಇನ್ಸ್ಟಿಟ್ಯೂಟ್‌ನಲ್ಲಿ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಡಾ. ರಾಜ್ ಕುಮಾರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳೂ ಸಂದಿವೆ.