ಬೆಂಗಳೂರು: ಮುಂಬರು ಲೋಕಸಭೆ ಚುನಾವಣೆಗೆ ಮಾರ್ಚ್ ತಿಂಗಳಲ್ಲಿ ನೀತಿ ಸಂಹಿತೆ ಘೋಷಣೆಯಾಗುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ 2024-25ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ 16ರಂದು ಮಂಡಿಸಲಾಗುವುದು.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು, ಫೆಬ್ರವರಿ 12 ರಿಂದ 23ರವರೆಗೆ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದ್ದು ಈ ನಡುವೆಯೇ ಫೆಬ್ರವರಿ 16ರಂದು ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಫೆಬ್ರವರಿ 12ರಂದು ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದ ಮೊದಲ ದಿನದಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆಬ್ರವರಿ 16ರಂದು ಸಿಎಂ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ 75,000 ಕೋಟಿ ರೂ. ವೆಚ್ಚವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದರ ಜತೆ ಜತೆಗೆ ಮತ್ತಷ್ಟು ಜನಪ್ರಿಯ ಯೋಜನಗೆಳನ್ನು ಘೋಷಿಸಲಾಗುತ್ತದೆಯೇ ಎಂದು ಕಾತುರದಿಂದ ಜನತೆ ಕಾಯುತ್ತಿದ್ದಾರೆ. ಜನತೆಯ ಭರವಸೆಯನ್ನು ಹುಸಿಗೊಳಿಸದಂತೆ ಸಿಎಂ ಸಿದ್ದರಾಮಯ್ಯ ಕಾಡಿಕೊಂಡು ಬರುತ್ತಾರೆಯೇ ಎಂಬುದಕ್ಕೆ ಫೆ.16ರಂದು ಉತ್ತರ ಸಿಗಲಿದೆ.