ಸಂಗಾರೆಡ್ಡಿ: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿ, ಐವರು ಮೃತಪಟ್ಟಿದ್ದು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಚಂದಾಪುರ ಗ್ರಾಮದಲ್ಲಿರುವ ಎಸ್‌ಬಿಆರ್ ಆರ್ಗಾನಿಕ್ಸ್ (SBR Organics Limited) ಕಾರ್ಖಾನೆಯಲ್ಲಿ, ರಾಸಾಯನಿಕ ಸೋರಿಯಿಂದಾಗಿ ಬುಧವಾರ ಸಂಜೆ ಐದು ಗಂಟೆಗೆ ಭೀಕರ ಸ್ಫೋಟ ಸಂಭವಿಸಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಖಾನೆಯಲ್ಲಿ ಸಿಲುಕಿದ್ದ ಕೆಲವು ಕಾರ್ಮಿಕರ ರಕ್ಷಣೆ ಮಾಡಿದ್ದಾರೆ.
ಇನ್ನು ಗಾಯಗೊಂಡಿರುವ 10 ಮಂದಿಯ ಸ್ಥಿತಿ ಗಂಭೀರ ಎನ್ನಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯನ್ನು ರಾತ್ರಿ 8 ಗಂಟೆ ಸುಮಾರಿಗೆ ನಿಯಂತ್ರಣಕ್ಕೆ ತರಲಾಗಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭೀಕರ ಹೊಗೆ ಆವರಿಸಿತ್ತು.
ಘಟನೆಯಿಂದ ಚಂದಾಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮನೆಮಾಡಿತ್ತು. ಹಾನಿಗೊಳಗಾದ ಆಸ್ತಿಯ ಮೌಲ್ಯವನ್ನು ಇನ್ನೂ ಮೌಲ್ಯಮಾಪನ ಮಾಡಬೇಕಾಗಿದೆ. ಸಂಗಾರೆಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಾರಣಾಂತಿಕ ಸ್ಫೋಟಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.