ರಾಮನಗರ: ಮುಂದೆ ಹೋಗುತ್ತಿದ್ದ ಕಾರು ಚಾಲಕ ಅಚಾನಕ್ಕಾಗಿ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ವೇಗವಾಗಿ ಬಂದ ಕಾರು ಅದರ ಮೇಲೇರಿರುವ ಘಟನೆ ಜಿಲ್ಲೆಯ ಲಂಬಾಣಿ ತಾಂಡಾ ಬಳಿ ಬಳಿ ಇಂದು ನಡೆದಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡಾ ಬಳಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರೊಂದು ಮತ್ತೊಂದು ಕಾರಿನ ಮೇಲೆ ಹತ್ತಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಎರಡು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಸ್ವಚ್ಛಗೊಳಿಸಲಾಗುತ್ತಿತ್ತು. ಈ ವೇಳೆ ಬ್ಯಾರಿಕೇಡ್ ಗಮನಿಸದೆ ಬಂದು ಹಠಾತ್ತಾಗಿ ಕಾರು ಚಾಲಕ ಬ್ರೇಕ್ ಹಾಕಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕಾರು ಆ ಕಾರಿಗೆ ಡಿಕ್ಕಿಯಾಗಿದ್ದು ಅದೇ ವೇಗದಲ್ಲಿ ಇನ್ನೊಂದು ಕಾರಿನ ಮೇಲೇರಿ ಹೋಗಿದೆ.
ಅದೃಷ್ಟವಶಾತ್ 2 ಕಾರುಗಳಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿದ್ದಾರೆ.