ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಸಹಕಾರ ಸಂಘಗಳ ಚುನಾವಣೆಗಳನ್ನು ಮುಂದೂಡಿ ಇದೇ ಮಾ.13ರಂದು ಹೊರಡಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ ಎಂದು ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಎ.ಸಿ.ದಿವಾಕರ್ ತಿಳಿಸಿದ್ದಾರೆ.
ಮಾ.13 ರಂದು ಮುಂದಿನ ಆದೇಶದವರೆಗೂ ಹಾಲಿ ಇರುವ ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳನ್ನೇ ಮುಂದುವರಿಯುವಂತೆ ಆದೇಶ ನೀಡಲಾಗಿತ್ತು.
ಆದರೆ ಕೆಲ ಸಾಧಕ ಬಾಧಕಗಳನ್ನು ಗಮನಿಸಿದ ಸರ್ಕಾರ ಮಾ.13ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆದಿರುವ ಬಗ್ಗೆ ಮಾ.16ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ಕಳೆದ ಮಾರ್ಚ್ 13ರಂದೆ ಈ ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಸ್ತುತ ನಡೆಯಬೇಕಿದ್ದ ಕೆಎಸ್‌ಆರ್‌ಟಿಸಿ ಸೊಸೈಟಿ ಚುನಾವಣೆ ಕೂಡ ಮುಂದೂಡಲ್ಪಟ್ಟಿತ್ತು.
ಆದರೆ, ಆ ಆದೇಶವನ್ನು ಹಿಂಪಡೆದಿರುವುದರಿಂದ ಚುನಾವಣೆ ಅತೀ ಶೀಘ್ರದಲ್ಲೇ ನಡೆಯಬಹುದು ಎಂದು ಹೇಳಲಾಗುತ್ತಿದೆ.