ನಾಣ್ಯಾಪುರ: ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮ ಪಂಚಾಯಿತಿ ವ್ತಾಪ್ತಿಯ ನಾಣ್ಯಾಪುರ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿರುವ ಶ್ರೀ ಸಂಗನ ಬಸವೇಶ್ವರ ಪಾಳು ಬಿದ್ದ ಮಠದ ಆವರಣದಲ್ಲಿದ್ದ ಶ್ರೀಸಂಗನ ಬಸವಣ್ಣನ ಬೃಹತ್ ಮೂರ್ತಿಯನ್ನು ನಿಧಿಗಳ್ಳರು ಹಾನಿಗೊಳಿಸಿದ್ದಾರೆ.
ಕಲ್ಲಿನ ಗದ್ದಿಗೆಯಂತಿದ್ದ ಕಟ್ಟೆಯನ್ನು ನಿಧಿಗಾಗಿ ಅಗೆದಿದ್ದಾರೆ. ನಿಧಿಗಳ್ಳರು ಬುಧವಾರ ರಾತ್ರಿಯೇ ಕನ್ನ ಹಾಕಿ ಅಗೆದಿದ್ದಾರೆಂದು ಹೇಳಲಾಗುತ್ತಿದ್ದು ಗುರುವಾರ ಕೃತ್ಯ ಬೆಳಕಿಗೆ ಬಂದಿದೆ.
ಹಲವು ದಿನಗಳಿಂದ ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕುಗಳ ಸುತ್ತ ಮುತ್ತ, ಗ್ರಾಮೀಣ ಭಾಗದ ನಿರ್ಜನ ಪ್ರದೇಶದಲ್ಲಿರುವ ಪಾಳುಬಿದ್ದ ದೇವಸ್ಥಾನಗಳಿಗೆ ನಿಧಿಗಳ್ಳರ ಹಾವಳಿ ಮಿತಿ ಮೀರಿದೆ ಎಂದು ಹಲವು ಗ್ರಾಮಸ್ಥರು ಆತಂಕ ವ್ಯೆಕ್ತಪಡಿಸಿದ್ದಾರೆ.
ಖದೀಮರು ಸಂಗನ ಮಠ ಬಹು ಪುರಾತನ ಕಾಲದ, ಪಾಳು ಬಿದ್ದ ಪುರಾತನ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡಿದ್ದಾರೆಂದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಇದರ ಜತೆಗೆ ಬೈಕ್ ಕಳವು, ರಾಸುಗಳ ಕಳವು ಸೇರಿ ಇತ್ಯಾದಿ ಕಳ್ಳತನ ಪ್ರಕರಣಗಳು ಕೂಡ್ಲಿಗಿ ಹಾಗೂ ಹಗರಿ ಬೊಮ್ಮನಹಳ್ಳಿ ತಾಲೂಕಿನ ಹಲವೆಡೆಗಳಲ್ಲಿ ಹೆಚ್ಚಾಗಿವೆ.
ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿರುವ ಪೊಲೀಸರು, ನಿಧಿಗಳ್ಳರನ್ನು ಶೀಘ್ರವೆ ಪತ್ತೆ ಹಚ್ಚಿ ಪ್ರಕರಣಗಳನ್ನು ಭೇದಿಸಬೇಕಿದೆ. ಆಗ ಮಾತ್ರ ಸಾರ್ವಜನಿಕ ವಲಯದಲ್ಲಿ, ಪೊಲೀಸರ ಬಗ್ಗೆ ಗೌರವ ಮೂಡಲು ಸಾಧ್ಯ ಎಂದು ನಾಗರಿಕರು ಹಾಗೂ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ನಾಣ್ಯಪುರ ಗ್ರಾಮಸ್ಥರು ಸೇರಿದಂತೆ, ನೆರೆ ಹೊರೆಯ ಗ್ರಾಮಸ್ಥರು ಹಾಗೂ ಶ್ರೀಸಂಗನ ಬಸವೇಶ್ವರನ ಭಕ್ತರು ಧಾವಿಸಿ ನಿಧಿಕಳ್ಳರಿಗೆ ಹಿಡಿಶಾಪ ಹಾಕುತ್ತಿದ್ದಾರೆ.