ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿ ಬಸ್ಸೊಂದು ಹಳ್ಳಕ್ಕೆ ಬಿದ್ದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಬೇಲೂರು-ಮೂಡಿಗೆರೆ ತಾಲೂಕಿನ ಗಡಿ ಗ್ರಾಮ ಚೀಕನಹಳ್ಳಿ ಕ್ರಾಸ್ ಬಳಿ ಈದುರ್ಘಟನೆ ನಡೆದಿದ್ದು, ಬೆಂಗಳೂರಿನ ಯಲಹಂಕ ನಿವಾಸಿ ಸುರೇಖಾ (45) ಎಂಬುವರು ಮೃತಪಟ್ಟಿದ್ದಾರೆ.
ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ಬಸ್ ಶನಿವಾರ (ನ.4) ಬೆಳಗ್ಗಿನ ಜಾವ 4.45ಕ್ಕೆ ಚೀಕನಹಳ್ಳಿ ಬಳಿ ಬರುತ್ತಿದ್ದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಈ ಬಸ್ ಬೆಂಗಳೂರಿನಿಂದ ಧರ್ಮಸ್ಥಳ – ಸುಬ್ರಹ್ಮಣ್ಯ – ಹೊರನಾಡು- ಶೃಂಗೇರಿಗೆ ಪ್ರವಾಸ ಹೊರಟಿತ್ತು ಎಂದು ತಿಳಿದು ಬಂದಿದೆ.
ಬಸ್ನಲ್ಲಿ ರಾಜಾನುಗುಂಟೆ ಹಾಗೂ ಕೆ.ಆರ್.ಪುರಂನ 48ಕ್ಕೂ ಹೆಚ್ಚು ಜನರು ಪ್ರವಾಸ ಹೊರಟ್ಟಿದ್ದರು. ಇವರಲ್ಲಿ ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಇನ್ನು ಬಸ್ನಲ್ಲಿದ್ದ 10ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸದ್ಯ ಗಾಯಾಳುಗಳನ್ನು ಹಾಸನ ಜಿಲ್ಲೆಯ ಬೇಲೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಸ್ಕೆಬೈಲು-ಚೀಕನಹಳ್ಳಿ ಈ ತಿರುವಿನಲ್ಲಿ ಈಗಾಗಲೇ 10 ತಿಂಗಳಲ್ಲಿ 70ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಚೀಕನಹಳ್ಳಿಯ ಕ್ರಾಸ್ಗೆ ತಡೆಗೋಡೆ ನಿರ್ಮಿಸಿ ಎಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದರೂ ಸರ್ಕಾರ ಕಿವಿಗೊಡುತ್ತಿಲ್ಲ. ಈ ತಿರುವಿನಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿದ್ದು ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.