ಹೈದರಾಬಾದ್: ಬಹು ಅಂಗಾಂಗ ವೈಫಲ್ಯದಿಂದಾಗಿ ಅನಾರೋಗ್ಯಕ್ಕೆ ಸಿಲುಕ್ಕಿದ್ದ ಹಿರಿಯ ನಟ ಶರತ್ ಬಾಬು (71) ಸೋಮವಾರ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
‘ಅಮೃತವರ್ಷಿಣಿ’ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಶರತ್ ಬಾಬು ಅವರಿಗೆ ಏಪ್ರಿಲ್ ಮೊದಲ ವಾರ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡ ಬಳಿಕ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು.
ಆದರೆ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ. ಐಸಿಯು ವಾರ್ಡ್ನಲ್ಲಿಟ್ಟು ಸೂಕ್ತ ಚಿಕಿತ್ಸೆ ನೀಡಿ, ಲಕ್ಷ ಲಕ್ಷ ಖರ್ಚು ಮಾಡಿದರೂ ಕೂಡ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ.
ನಾಲ್ಕು ದಶಕಗಳ ಕಾಲ ಚಿತ್ರೋದ್ಯಮದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿರುವ ಶರತ್ ಬಾಬು, ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ. ಆದರೂ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಅವರು ‘ಅಮೃತವರ್ಷಿಣಿ’ ಶರತ್ ಬಾಬು ಎಂದೇ ಫೇಮಸ್ ಆಗಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದಾಗಿತ್ತು. ಶಕ್ತಿ, ಕಂಪನ, ರಣಚಂಡಿ, ತುಳಸಿದಳ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಶರತ್ ಬಾಬು ಅವರ ನಿಧನಕ್ಕೆ ಚಿತ್ರರಂಗದ ನಟ- ನಟಿಯರು ಸಂತಾಪ ಸೂಚಿಸಿದ್ದಾರೆ. ನೆಚ್ಚಿನ ನಟನ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.