ಬೆಂಗಳೂರು: ಪ್ರಜಾಪ್ರಭುತ್ವ ಸ್ಥಾಪಿತವಾದ ನಂತರ ಕರ್ನಾಟಕ ಹಾಗೂ ಮದರಾಸು ರಾಜ್ಯಗಳಿಗೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದವರು ಜಯಚಾಮರಾಜೇಂದ್ರ ಒಡೆಯರ್, ಇಂದು ಅವರ 101ನೇ ಜಯನ್ಮದಿನಾಚರಣೆಯನ್ನು ರಾಜ್ಯದೆಲ್ಲೆಡೆ ಆಚರಿಸಲಾಗುತ್ತಿದೆ.
ಮಲ್ಲೇಶ್ವರದ ಪ್ಯಾಲೆಸ್ ಗುಟ್ಟಳ್ಳಿ ರಾಜರ ಬೀದಿಯಲ್ಲಿ ಆಯೋಜಿಸಿದ್ದ ಜಯಂತಿಯಲ್ಲಿ ಮಾತನಾಡಿದ ಹಿರಿಯ ರಂಗಭೂಮಿ ಕಲಾವಿದ ಆರ್. ವೆಂಕಟರಾಜು, ರಾಜರ ಆಳ್ವಿಕೆಯಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿದ ಮೈಸೂರು ರಾಜ್ಯದ ಕೊನೆಯ ಅರಸರು. ದೇಶದ ಆಳರಸರು ತಮ್ಮ ರಾಜ ಪದವಿಯ ತ್ಯಾಗಕ್ಕೆ ಹಿಂದೆ-ಮುಂದೆ ನೋಡುತ್ತಿದ್ದಾಗ, ಸ್ವಯಂ ಪ್ರೇರಿತರಾಗಿ ತಮ್ಮ ರಾಜ ಪದವಿಯನ್ನು ಬಿಟ್ಟುಕೊಟ್ಟ ಜನಾನುರಾಗಿ “ರಾಜಯೋಗಿ “. ನಿಮ್ಮ ಸಿಂಹಾಸನ ಹೋಯಿತಲ್ಲ? ಎಂದು ಪ್ರಶ್ನಿಸಿದ ಮಿತ್ರರು, ಹಿತೈಷಿಗಳು, ಮಾಧ್ಯಮ ಪ್ರತಿನಿಧಿಗಳಿಗೆ, ಹೌದು ಇಂದಿನಿಂದ ನಾನು ಕರ್ನಾಟಕದ ಜನರ ಹೃದಯ ಸಿಂಹಾಸನಾಧೀಶ್ವರ ಎಂದು ಸಾರುವ ಮೂಲಕ ಭಾರತಮಾತೆ ಕಿರೀಟದಲ್ಲಿ ಮುಕುಟ ಸ್ಥಾನ ಅಲಂಕರಿಸಿದವರು ಎಂದು ತಮ್ಮ ಆಡಳಿತದಲ್ಲಿ ಕಲೆ, ಸಾಹಿತ್ಯ, ಸಂಗೀತ, ಚಿತ್ರಕಲೆಗೆ ವಿಶೇಷ ಉತ್ತೇಜನವನ್ನು ನೀಡಿ ಪ್ರೋತ್ಸಾಹಿಸಿದ ಸ್ವಯಂ ವಾಗ್ಗೇಯಕಾರ ರಾಗಿದ್ದರು ಎಂದು ತಿಳಿಸಿದರು.
ಸಂಗೀತ ರೂಪಕ, ಅಥವಾ ಆಯಾ ಪ್ರಾದೇಶಿಕ ಭಾಷಾ ಕಾವ್ಯಗಳ ಮೂಲಕ ಹರಿ-ಹರ, ಜಿನ ಹೀಗೆ ಪುರಾಣ ಕಥೆಗಳನ್ನು ನಿಶ್ಚಿತವಾದ ರಾಗ ಭಾವಗಳಲ್ಲಿ ಓದುವುದು,ಕಾವ್ಯವಾಚನ, ಗಮಕ ಕೆಲವುಸಲ ಗದ್ಯ-ಪದ್ಯ ಗಳೊಂದಿಗೆ ಚಂಪೂ ಕಾವ್ಯಗಳನ್ನು ಹಾಡುವ, ಕಥಾಕೀರ್ತನ ಗಳನ್ನು ದೇವಾಲಯಗಳಲ್ಲಿ, ರಾಜಾಶ್ರಯದಲ್ಲಿ ಮತ್ತು ಶ್ರೀಮಂತರ ನಿವಾಸಗಳಲ್ಲಿ, ಏರ್ಪಡಿಸುವ ಪ್ರಾಚೀನ ಪದ್ಧತಿಯನ್ನು ಮಹಾರಾಜರು ಉಳಿಸಿ ಬೆಳೆಸಿಕೊಂಡು ಬಂದಿದ್ದರೆಂಬುದು ಚರಿತ್ರೆಯ ಪುಟಗಳಲ್ಲಿ ದಾಖಲಾರ್ಹ ಸಂಗತಿ ಎಂದರು.
ಇಂದಿನ ಯುವ ಪೀಳಿಗೆ ಮಹಾರಾಜರನ್ನು ನೋಡಿಲ್ಲ !ಅದನ್ನು ಹೇಳುವ ತಲೆಮಾರು ಇಂದು ಕಾಲವಾಗಿದೆ !ಆದರೆ ಕೇವಲ ತನ್ನ ಉದ್ಧಾರಕ್ಕೆ ಮಾತ್ರವಲ್ಲದೆ ಲಕ್ಷಾಂತರ ಜೀವಿಗಳ ಉದ್ಧಾರಕ್ಕೆ ಮಹಾರಾಜರಾಗಿ ಅವರು ಅಳವಡಿಸಿಕೊಂಡ ಕಾಯಕನಿಷ್ಠೆ, ಆತ್ಮ ಗುಣ ಸಂಪತ್ತು, ಸಕಾಲಿಕವಾಗಿ ಇರುವುದಲ್ಲದೆ ಸದಾ ಆದರ್ಶಪ್ರಾಯವಾಗಿದೆ. ಜನದನಿಯ ಉನ್ನತಿಗೆ ಮಾದರಿ ಆಗಬಹುದಾಗಿದೆ ಎಂಬುದು ಅವರ ಹುಟ್ಟುಹಬ್ಬದ ಸದಾಶಯ. ಜಯಚಾಮರಾಜೇಂದ್ರ ಒಡೆಯರ್ ಸದಾ ಪ್ರಾತಃಸ್ಮರಣೀಯರು ಎಂದು ಹೇಳಿದರು.
ಕನ್ನಡ ಪರ ಹೋರಾಟಗಾರರಾದ ನಾಣಿ ರಾಜು, ಆರೋಗ್ಯ ಇಲಾಖೆ ಸಂಪರ್ಕ ಅಧಿಕಾರಿ ರಾಜೇಶ್ ಅರಸ್, ಕಾಂಗ್ರೆಸ್ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತೆ ಆಶಾ ರಾಜು, ಬಿಜೆಪಿ ಯುವ ಮುಖಂಡ ಪ್ರಸನ್ನ ರಾಜು ಮತ್ತು ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಸಿಹಿ ವಿತರಣೆ ಮಾಡಲಾಯಿತು.