ಬೆಂಗಳೂರು: ಮತದಾರರ ಪಟ್ಟಿ ಕಳವು ಪ್ರಕರಣ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಸದ್ದು ಮಾಡುತ್ತಿದ್ದು, ಮಾಧ್ಯಮಗಳಲ್ಲಿ ಸರಣಿ ವರದಿಗಳು ಪ್ರಸಾವಾಗುತ್ತಿದ್ದಂತೆ ಪೊಲೀಸರು ಕೂಡ ಎಚ್ಚೆತ್ತುಕೊಂಡು ಈ ಬಗ್ಗೆ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇತ್ತ ರಾಜಕೀಯ ಪಕ್ಷಗಳಲ್ಲಿ ಒಂದು ಪಕ್ಷದ ಮೇಲೆ ಮತ್ತೊಂದು ಪಕ್ಷ ಗೂಬೆ ಕೂರಿಸುವ ಕಾಲೆಳೆಯುವ ಕೆಲಸದಲ್ಲಿ ಮಗ್ನವಾಗಿವೆ. ಜತೆಗೆ ಒಂದು ಹೆಜ್ಜೆ ಮುಂದೆ ಹೋಗಿ ಆಡಳಿತ ಪಕ್ಷವೇ ಈ ಪ್ರಕರಣ ಸಂಬಂಧ ಲೋಕಾಯುಕ್ತಕ್ಕೆ ದೂರು ಕೊಡುವುದಾಗಿ ತಿಳಿಸಿದೆ.
ಅಂದರೆ ಇಲ್ಲಿ ಆಡಳಿತದಲ್ಲಿರುವ ಪಕ್ಷವೇ ಈ ರೀತಿ ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ. ತಮ್ಮ ಪಕ್ಷದ ಸರ್ಕಾರವೇ ಇರುವಾಗ ತಪ್ಪು ಮಾಡಿದವರನ್ನು ಹಿಡಿದು ಮಟ್ಟಹಾಕಲು ಆಗುವುದಿಲ್ಲ ಎಂಬುದನ್ನು ಈ ಸರ್ಕಾರ ಒಪ್ಪಿಕೊಳ್ಳುತ್ತಿದೆ ಎಂದು ವಿಪಕ್ಷಗಳ ಮುಖಂಡರು ಕಲೆಳೆಯುತ್ತಿದ್ದಾರೆ.
ಇನ್ನು ಈ ಎಲ್ಲ ಬೆಳವಣಿಗಗಳ ನಡುವೆಯೇ ಚಿಲುಮೆ ಸಂಸ್ಥೆಯಿಂದ ಮತದಾರರ ಪಟ್ಟಿ ಕಳವು ಪ್ರಕರಣದಲ್ಲಿ ರಾಜಕಾರಣಿಗಳ ಕೈವಾಡವಿರುವುದು ಬಯಲಾಗಿದೆ. ಚಿಲುಮೆ ಸಂಸ್ಥೆ ಜತೆ ರಾಜಕಾರಣಿಗಳು ಶಾಮೀಲಾಗಿರುವ ಬಗ್ಗೆ ಹಲವು ದಾಖಲೆಗಳು ಪೊಲೀಸರಿಗೆ ಸಿಕ್ಕಿವೆ.
ಇದರಲ್ಲಿ 11ಕ್ಕೂ ಹೆಚ್ಚು ರಾಜಕಾರಣಿಗಳು, ಐಎಎಸ್, ಕೆಎಎಸ್ ಅಧಿಕಾರಿಗಳ ವಿಸಿಟಿಂಗ್ ಕಾರ್ಡ್‌ಗಳು ಪತ್ತೆಯಾಗಿದ್ದು ಅವುಗಳನ್ನು ವಶಕ್ಕೆ ಪಡೆಯಲಾಗಿದೆ. 7ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಡೆಸಿದ ಕೆಲವು ಕ್ಷೇತ್ರಗಳ ಸಮೀಕ್ಷೆಗಳ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ ಪ್ರಮುಖ ಸಂಸ್ಥೆಯ ಲೆಟರ್ ಹೆಡ್‍ಗಳನ್ನೂ ಕೂಡ ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳ್ಳಿಸಿದ್ದಾರೆ.
ಅಸಲಿಗೆ ಚಿಲುಮೆ ಸಂಸ್ಥೆಯ ಮೇಲಿನ ದಾಳಿಯಲ್ಲಿ ಅಧಿಕೃತ ಕಚೇರಿ ಹೊಂದಿದ್ದರೂ ಅನಧಿಕೃತವಾಗಿ ಬಿಲ್ಡಿಂಗ್ ಒಂದರಲ್ಲಿ ವ್ಯವಹಾರ ನಡೆಸುತ್ತಿರುವುದು ಬಯಲಾಗಿದೆ. ಈ ಕಟ್ಟಡದಲ್ಲಿನ ದಾಳಿ ವೇಳೆ ಪೊಲೀಸರಿಗೆ ಹಲವು ದಾಖಲೆಗಳು ಸಿಕ್ಕಿವೆ. ನಾಲ್ಕು ಬ್ಯಾಗ್‌ಗಳು, ಒಂದು ಚೀಲದಲ್ಲಿ ಪೊಲೀಸರು ಚೆಕ್‌ಗಳು, ಬ್ರೌಷರ್‌ಗಳು, ಲೆಟರ್ ಹೆಡ್‌ಗಳು, ಸ್ಕಾಲರ್ ಶಿಪ್ ದಾಖಲಾತಿಗಳನ್ನು ಕೊಂಡೊಯ್ದಿದ್ದಾರೆ.
ಈ ಚೆಕ್‌ಗಳು, ಲೆಟರ್ ಹೆಡ್‌ಗಳು ಚಿಲುಮೆ ಸಂಸ್ಥೆಯದ್ದಲ್ಲ. ಪ್ರಭಾವಿ ರಾಜಕಾರಣಿಗಳಿಗೆ ಸೇರಿದ ಚೆಕ್, ಲೆಟರ್ ಹೆಡ್ ಬ್ರೌಷರ್ ಪತ್ತೆಯಾಗಿದೆ. ಆ ಪ್ರಭಾವಿ ರಾಜಕಾರಣಿಗೂ ಚಿಲುಮೆಗೂ ಏನು ಸಂಬಂಧ? ಚಿಲುಮೆ ಹೆಸರಲ್ಲಿ ಆ ಕಟ್ಟಡದಲ್ಲಿ ರಾಜಕಾರಣಿ ಮಾಡ್ತಿದ್ದ ವ್ಯವಹಾರವಾದರೂ ಏನು ಎನ್ನುವುದರ ಕುರಿತು ಎಲ್ಲ ದಾಖಲಾತಿಗಳನ್ನು ಹಲಸೂರು ಗೇಟ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.