ಶಕ್ತಿಯೋಜನೆಗಾಗಿ ರಾಜಸ್ಥಾನದ ಆಧಾರ್ ಕಾರ್ಡ್ಗೆ ಬೆಂಗಳೂರು ನಿವಾಸಿ ಎಂಬ ನಕಲಿ ಕಾರ್ಡ್ ಸೃಷ್ಟಿಸಿಕೊಂಡು ಮಹಿಳೆ ಓಡಾಟ!
ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಸಿಗುತ್ತಿರುವುದನ್ನು ದುರುಪಯೋಗಪಡಿಸಿಕೊಳ್ಳಲು ಕೆಲವು ಕಿಡಿಗೇಡಿಗಳು ನಕಲಿ ದಾಖಲೆಗಳ ಮೊರೆ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಸ್ಥಾನ ಮೂಲದ ಮಹಿಳೆಯರು ತಮ್ಮ ಅಸಲಿ ಆಧಾರ್ ಕಾರ್ಡ್ಗಳನ್ನು ತಿದ್ದುಪಡಿ (ಎಡಿಟ್) ಮಾಡಿ, ಅದರಲ್ಲಿ ಬೆಂಗಳೂರಿನ ಜಿಗಣಿ ವಿಳಾಸವನ್ನು ನಕಲಿಯಾಗಿ ಸೃಷ್ಟಿಸಿಕೊಂಡು ಓಡಾಡುತ್ತಿರುವುದು ಪತ್ತೆಯಾಗಿದೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ಗಳಲ್ಲಿ ನಕಲಿ ಆಧಾರ್ ಕಾರ್ಡ್ಗಳ ಹಾವಳಿ ಹೆಚ್ಚುತ್ತಿದ್ದು, ಇದರಿಂದ ನಿರ್ವಾಹಕರ ತಲೆದಂಡವಾಗುತ್ತಿರುವುದು ಭಾರಿ ನೋವಿನ ಸಂಗತಿಯಾಗಿದೆ.
ನಿನ್ನೆ ನೋಡಿ ರಾಜಸ್ಥಾನ ಮೂಲದ ಮಹಿಳೆಯೊಬ್ಬರು ತಮ್ಮ ಆಧಾರ್ ಕಾರ್ಡ್ಗಳನ್ನು ತಿದ್ದುಪಡಿ ಮಾಡಿಕೊಂಡು ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಿದ್ದಾರೆ. ಹೌದು! ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ಗಳಲ್ಲಿ ನಕಲಿ ದಾಖಲೆಗಳ ಹಾವಳಿ ಹೆಚ್ಚುತ್ತಿದ್ದು, ಸದ್ಯ ರಾಜಸ್ಥಾನ ಮೂಲದ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿ, ಬೆಂಗಳೂರಿನ ಜಿಗಣಿ ವಿಳಾಸಕ್ಕೆ ನಕಲು ಸೃಷ್ಟಿಸಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.
ಈ ರೀತಿ ಇವರೊಬ್ಬರ ಅಲ್ಲ ಒಂದು ಜಾಲವೇ ಇದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಆ ಅಧಿಕಾರಿಗಳು ನಿರ್ವಾಹಕರಿಗೆ ಶಿಕ್ಷೆಕೊಟ್ಟಿದ್ದು, ನಕಲಿಗಳನ್ನು ಬಿಟ್ಟುಕಳುಹಿಸುತ್ತಿದ್ದಾರೆ. ಇದರಿಂದ ಈ ರೀತಿಯ ಜಾಲ ಬೃಹದಾಕಾರವಾಗಿ ರಾಜ್ಯದಲ್ಲಿ ವಿಸ್ತರಿಸುತ್ತಿದೆ.
ಹೌದು! ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಸಿಗುತ್ತಿರುವುದನ್ನು ದುರುಪಯೋಗಪಡಿಸಿಕೊಳ್ಳಲು ಕೆಲವು ಕಿಡಿಗೇಡಿಗಳು ನಕಲಿ ದಾಖಲೆಗಳ ಮೊರೆ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಸ್ಥಾನ ಮೂಲದ ಮಹಿಳೆಯರು ತಮ್ಮ ಅಸಲಿ ಆಧಾರ್ ಕಾರ್ಡ್ಗಳನ್ನು ತಿದ್ದುಪಡಿ (ಎಡಿಟ್) ಮಾಡಿ, ಅದರಲ್ಲಿ ಬೆಂಗಳೂರಿನ ಜಿಗಣಿ ವಿಳಾಸವನ್ನು ನಕಲಿಯಾಗಿ ಸೃಷ್ಟಿಸಿಕೊಂಡು ಓಡಾಡುತ್ತಿರುವುದು ಪತ್ತೆಯಾಗಿದೆ.
ವಂಚನೆ ಹೇಗೆ ಮಾಡುತ್ತಿದ್ದಾರೆ?: ರಾಜಸ್ಥಾನ ಸೇರಿದಂತೆ ಹೊರರಾಜ್ಯಗಳ ಮೂಲ ಆಧಾರ್ ಕಾರ್ಡ್ನಲ್ಲಿರುವ ವಿಳಾಸವನ್ನು ತಂತ್ರಜ್ಞಾನದ ನೆರವಿನಿಂದ ಎಡಿಟ್ ಮಾಡಿ, ಕರ್ನಾಟಕದ ಹಲವು ಪ್ರದೇಶಗಳ ಸ್ಥಳೀಯ ವಿಳಾಸವನ್ನು ಸೇರಿಸಲಾಗುತ್ತಿದೆ. ತಿದ್ದುಪಡಿ ಮಾಡಿದ ಈ ನಕಲಿ ಆಧಾರ್ ಕಾರ್ಡ್ಗಳನ್ನು ಅಸಲಿಯಂತೆ ಕಾಣಲು ಹೈ-ಕ್ವಾಲಿಟಿ ಕಲರ್ ಜೆರಾಕ್ಸ್ ಅಥವಾ ಲ್ಯಾಮಿನೇಷನ್ ಮಾಡಿಸಿ, ಬಸ್ ನಿರ್ವಾಹಕರಿಗೆ (ಕಂಡಕ್ಟರ್) ತೋರಿಸಲಾಗುತ್ತಿದೆ.
ಸ್ಥಳೀಯರ ಸೋಗು: ಹೊರನೋಟಕ್ಕೆ ಕರ್ನಾಟಕದ ವಿಳಾಸ ಇರುವುದರಿಂದ ಬಿಎಂಟಿಸಿ ನಿರ್ವಾಹಕರು ಸಹ ಅನಿವಾರ್ಯವಾಗಿ ಉಚಿತ ‘ಶಕ್ತಿ’ ಟಿಕೆಟ್ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಿರ್ವಾಹಕರಿಗೆ ಎದುರಾಗುತ್ತಿರುವ ಸಮಸ್ಯೆಗಳು: ಬಸ್ಸುಗಳಲ್ಲಿ ಅತಿಯಾದ ಜನದಟ್ಟಣೆ ಇರುವ ಸಮಯದಲ್ಲಿ ಆಧಾರ್ ಕಾರ್ಡ್ಗಳ ಕ್ಯೂಆರ್ ಕೋಡ್ (QR Code) ಅನ್ನು ಸ್ಕ್ಯಾನ್ ಮಾಡಿ ಪರಿಶೀಲಿಸುವುದು ನಿರ್ವಾಹಕರಿಗೆ ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ವಂಚಕರು, ಕೇವಲ ಕಾರ್ಡ್ ಮೇಲಿರುವ ವಿಳಾಸವನ್ನು ತೋರಿಸಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಭಾಷೆಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಹಲವು ಬಾರಿ ನಿರ್ವಾಹಕರೊಂದಿಗೆ ವಾಗ್ವಾದಕ್ಕೂ ಇಳಿಯುತ್ತಿದ್ದಾರೆ.
ತನಿಖೆ ಮತ್ತು ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ: ರಾಜ್ಯದೊಳಗೆ ಅಲ್ಲಲ್ಲಿ ಇಂತಹ ನಕಲಿ ಕಾರ್ಡ್ಗಳನ್ನು ಸೃಷ್ಟಿಸಿಕೊಡುವ ಸೈಬರ್ ಸೆಂಟರ್ಗಳು ಅಥವಾ ಏಜೆಂಟರ ಜಾಲ ಸಕ್ರಿಯವಾಗಿರುವ ಶಂಕೆಯಿದೆ. ಹೀಗಾಗಿ ಇಂತಹ ನಕಲಿ ಜಾಲದ ವಿರುದ್ಧ ಪೊಲೀಸ್ ಇಲಾಖೆ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಇನ್ನು ಸರ್ಕಾರದ ಸೌಲತ್ತುಗಳನ್ನು ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸುವುದು ಮತ್ತು ಬಳಸುವುದು ಭಾರತೀಯ ನ್ಯಾಯ ಸಂಹಿತೆಯಡಿ ಗಂಭೀರ ಅಪರಾಧವಾಗಿದ್ದು, ಜೈಲು ಶಿಕ್ಷೆ ಮತ್ತು ದಂಡಕ್ಕೆ ಅರ್ಹವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡರೆ ಇತರರಿಗೂ ಭಯವಿರುತ್ತದೆ.







