ಮೈಸೂರು: ಜಗದ್ವಿಖ್ಯಾತ ಮೈಸೂರು ದಸರಾದಲ್ಲಿ ಅತ್ಯಾಕರ್ಷಕ ಜಂಬೂ ಸವಾರಿ ಇಂದು ನಡೆಯಲಿರುವುದರಿಂದ ಈಗಾಗಲೇ ಲಕ್ಷಾಂತರ ಮಂದಿ ಅರಮನೆ ನಗರಿಗೆ ಪ್ರವೇಶ ಮಾಡಿದ್ದಾರೆ. ಹೀಗಾಗಿ 414 ನೇ ನಾಡಹಬ್ಬ ದಸರಾ ಮೆರವಣಿಗೆ ಇಂದು ವೈಭವಯುತವಾಗಿ ನಡೆಯಲಿದೆ.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮೆರವಣಿಗೆಗೆ ಕೆಲವೇ ಕೆಲವು ಗಂಟೆಗಳು ಮಾತ್ರ ಉಳಿದಿದ್ದು, 414ನೇ ನಾಡಹಬ್ಬ ದಸರಾ ಮೆರವಣಿಗೆಗೆ ಇಡೀ ಮೈಸೂರು ಸಜ್ಜಾಗಿದೆ. ವಿಶ್ವದ ದೃಷ್ಟಿ ಇಂದು ಮೈಸೂರಿನ ಮೇಲಿದೆ. ಜಂಬೂಸವಾರಿ ಕಣ್ತುಂಬಿಕೊಳ್ಳಲು ಕರುನಾಡು ಕೂಡ ಕಾತರದಿಂದ ಕಾಯ್ತಿದೆ.
ಐತಿಹಾಸಿಕ `ದಸರಾ’: ದಸರಾ ಮೆರವಣಿಗೆ ಆರಂಭಕ್ಕೂ ಮುನ್ನ ಮೈಸೂರಿನ ಅರಮನೆಯಲ್ಲಿ (Mysuru Darasa) ಖಾಸಗಿ ದರ್ಬಾರ್ ಭಾಗವಾಗಿ ವಿಜಯಯಾತ್ರೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಅರಮನೆಯ ಕಲ್ಯಾಣ ಮಂಟಪದ ಮುಂಭಾಗ ಜಟ್ಟಿ ಸಮುದಾಯದವರು ಜಟ್ಟಿ ಕಾಳಗ ನಡೆಸಿ ಮಹಾರಾಜರಿಗೆ ತಮ್ಮ ನಿಷ್ಠೆ ಪ್ರದರ್ಶಿಸಲಿದ್ದಾರೆ. ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ನಡೆಯರ್ ವಿಜಯಾ ಯಾತ್ರೆ ನಡೆಸಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಮಧ್ಯಾಹ್ನ 1.46ರಿಂದ 2.08ರಲ್ಲಿ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜದ ಪೂಜೆ ನೆರವೇರಲಿದೆ. ನಂತರ ನಾಡಿನ ಕಲೆ ಸಂಸ್ಕೃತಿ, ಪರಂಪರೆಯನ್ನು ಸಾರುವ ಸ್ತಬ್ಧಚಿತ್ರಗಳು, ಕಲಾತಂಡಗಳ ಅದ್ದೂರಿ ಮೆರವಣಿಗೆ ಆರಂಭವಾಗಲಿದೆ. ಸಂಜೆ 4.40ರಿಂದ 5 ಗಂಟೆಯವರೆಗೆ ಸಲ್ಲುವ ಶುಭ ಮೀನ ಮುಹೂರ್ತದಲ್ಲಿ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಿದ್ದಾರೆ.
750 ಕೆಜಿ ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆ ಚಾಮುಂಡಿ ಮೂರ್ತಿಯನ್ನು ಹೊತ್ತ ಅಭಿಮನ್ಯು ಸಾಂಸ್ಕೃತಿಕ ನಗರಿಯ ರಾಜಬೀದಿಯಲ್ಲಿ ಸಾಗಲಿದೆ. ಕ್ಯಾಪ್ಟನ್ ಅಭಿಮನ್ಯುಗೆ 14 ಆನೆಗಳು ಸಾಥ್ ನೀಡಲಿವೆ. ಈ ಕ್ಷಣಕ್ಕೆ 5 ಲಕ್ಷಕ್ಕೂ ಹೆಚ್ಚು ಮಂದಿ ಸಾಕ್ಷಿಯಾಗಲಿದ್ದಾರೆ.
ದಸರಾಗೆ ಆರಕ್ಷಕರು ಕಣ್ಗಾವಲು ಬೃಹತ್ ಮಟ್ಟದಲ್ಲಿ ಇದ್ದು, ಭದ್ರತೆಗಾಗಿ ಸಾವಿರಾರು ಪೊಲೀಸರ ನಿಯೋಜನೆ ಮಾಡಲಾಗಿದೆ. ಲಕ್ಷಾಂತರ ಜನ ದಸರಾ ಕಣ್ತುಂಬಿಕೊಳ್ಳಲು ಮೈಸೂರಿಗೆ ಈಗಾಗಲೇ ದೇಶ ವಿದೇಶದಿಂದ ಆಗಮಿಸಿದ್ದು, ರಾಜ್ಯ ಅಂತಾರಾಜ್ಯದಿಂದ ಆಗಮಿಸುತ್ತಿದ್ದಾರೆ. ಬರುವ ಎಲ್ಲರೂ ಸುರಕ್ಷಿತವಾಗಿ ದಸರಾ ನೋಡಬೇಕು ಎಂಬ ನಿಟ್ಟಿನಲ್ಲಿ ಪೊಲೀಸರು ಸಕಲ ರೀತಿಯಲ್ಲೂ ಸಿದ್ಧರಾಗಿದ್ದಾರೆ.