- ಲಾಲ್‌ಬಾಗ್ ಆವರಣದಲ್ಲಿ ಇಪಿಎಸ್ ಪಿಂಚಣಿದಾರರ 83ನೇ ಮಾಸಿಕ ಸಭೆ ಯಶಸ್ವಿ
ಬೆಂಗಳೂರು: ಬಹು ನಿರೀಕ್ಷಿತ 236ನೇ ಸಿಬಿಟಿ ಸಭೆ ನವೆಂಬರ್ 30ರಂದು ದೆಹಲಿಯಲ್ಲಿ ಜರುಗಿದ್ದು, ಈ ಸಭೆಯಲ್ಲಿ ಇಪಿಎಸ್ ನಿವೃತ್ತರಿಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಕೆಎಸ್‌ಆರ್‌ಟಿಸಿ & ಬಿಎಂಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಲಾಲ್‌ಬಾಗ್ ಆವರಣದಲ್ಲಿ ಡಿ.1ರಂದು ನಡೆದ ಇಪಿಎಸ್ ಪಿಂಚಣಿದಾರರ 83ನೇ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಸೆಪ್ಟಂಬರ್ 1, 2014ರ ನಂತರ ನಿವೃತ್ತರದ ಎಲ್ಲ ಪಿಂಚಣಿದಾರಿಗೆ ಅಧಿಕ ಪಿಂಚಣಿ ನೀಡುವ ಸಲುವಾಗಿ ಆರ್ಥಿಕ ಸೌಲಭ್ಯಗಳ ಕ್ರೋಡೀಕರಣವನ್ನು ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ಅಂದಿನ ಸಿಬಿಟಿ ಸಭೆಯಲ್ಲಿ ದೃಢಸಂಕಲ್ಪ ಮಾಡಲಾಗಿದೆ ಎಂದು ವಿವರಿಸಿದರು.
ಮುಂದುವರೆದಂತೆ ರಾಷ್ಟ್ರೀಯ ಸಂಘರ್ಷ ಸಮಿತಿ ಮುಖಂಡರು, ನವಂಬರ್ 29ರಂದು, ಕೇಂದ್ರ ಸರ್ಕಾರದ ಉನ್ನತ ಮಟ್ಟದ ಜನ ಪ್ರತಿನಿಧಿಗಳನ್ನು ಭೇಟಿ ಮಾಡಿ, ಕನಿಷ್ಠ ಹೆಚ್ಚುವರಿ ಪಿಂಚಣಿ ಬಗ್ಗೆ ಚರ್ಚಿಸಿದ್ದು, ಮಾತುಕತೆ ಫಲಪ್ರದವಾಗಿದೆ ಎಂದು ತಿಳಿಸಿದರು.
ದಿನಕಳೆದಂತೆ ನಿವೃತ್ತರ ಸಂಖ್ಯೆ ಅಧಿಕವಾಗುತ್ತಿದ್ದು, ಇಪಿಎಫ್ಒ ಖಾತೆಯಲ್ಲಿ ಲಕ್ಷಾಂತರ ಕೋಟಿ ಕಾರ್ಪಸ್ ಹಣ ಇದೆ. ನಮ್ಮ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆ ಈಡೇರಿಸಲು, ಕೇಂದ್ರ ಸರ್ಕಾರಕ್ಕೆ ಯಾವುದೇ ಹಣಕಾಸಿನ ಮುಗ್ಗಟ್ಟು ಇಲ್ಲ, ಇಚ್ಛಾಶಕ್ತಿಯಕೊರತೆ ಇದೆ ಎಂದು ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ದೇಶದಲ್ಲಿ ಇಪಿಎಸ್ ನಿವೃತ್ತರು ಪಡೆಯುತ್ತಿರುವ ಸರಾಸರಿ ಪಿಂಚಣಿ ರೂ.1350 ಇದ್ದು, ಕೇಂದ್ರ ಸರ್ಕಾರ ಈ ಕೂಡಲೇ ದೃಢ ನಿರ್ಧಾರ ಕೈಗೊಂಡು, ಅಶೋಕ್ ರಾಹುತ್ ಅವರು ಪ್ರತಿಪಾದಿಸುತ್ತಿರುವ ಕನಿಷ್ಠ ಹೆಚ್ಚುವರಿ ಪಿಂಚಣಿ ನಿಗದಿಪಡಿಸಬೇಕೆಂದು ಆಗ್ರಹಿಸಿದರು.
ನಾವು ನೀಡುವ ಮನವಿ ಪತ್ರಗಳಿಗೆ ಅಧಿಕಾರಿಗಳು ಬಗ್ಗುವುದಿಲ್ಲ, ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳ ವಿರುದ್ಧ ನಾವು ನಡೆಸುವ ಹೋರಾಟವನ್ನು ಬದಲಿಸಿಕೊಳ್ಳಬೇಕು ಅಧಿಕಾರಿಗಳನ್ನು ಬಗ್ಗು ಬಡಿಯಲು “ದಂಡಂ ದಶಗುಣಂ” ಕ್ರಮವನ್ನು ಅನುಸರಿಸಬೇಕು ಎಂದು ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಹೇಳಿದರು.
ನಮ್ಮ ಸಂಘದ ನಾಗರಾಜು, ಮನೋಹರ್ ಹಾಗೂ ಕೃಷ್ಣಮೂರ್ತಿ ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಡೋಲಪ್ಪನವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯವಾಯಿತು.
ಇದಕ್ಕೂ ಮೊದಲು ಮಾಸಿಕ ಸಭೆಯ ದಿನದಿಂದಲೇ ಬೆಂಗಳೂರಿನಲ್ಲಿ ವಿಪರೀತ ಮಳೆಯಾಗಿದ್ದು, ನಾವು ಸೇವೆಯಲ್ಲಿರುವಾಗ ಮಳೆಬಿಸಿಲೆನ್ನದೆ, ಹಗಲಿರುಳು ಎನ್ನದೆ, ಕರ್ತವ್ಯ ನಿರ್ವಹಿಸಿದ ದಿನಗಳನ್ನು ಮೆಲಕು ಹಾಕುತ್ತಾ, ನಿವೃತ್ತರು ಲಾಲ್ ಬಾಗ್ ಆವರಣದಲ್ಲಿ ವಾಯು ವಿಹಾರ ನಡೆಸುತ್ತಾ, ತಮ್ಮ ಸಹೋದ್ಯೋಗಳನ್ನು ಕಂಡೊಡನೆ ಎಲ್ಲಿಲ್ಲದ ನವೊಲ್ಲಾಸದಿಂದ, ಉಭಯ ಕುಶಲೊಪರಿ ವಿಚಾರಿಸುತ್ತಿದ್ದುದು, ಸಾಮಾನ್ಯ ದೃಶ್ಯಾವಳಿಯಾಗಿತ್ತು.