ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಡಿ.31ರ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ: KSRTC ಅಧಿಕಾರಿಗಳು/ನೌಕರರ ಒಕ್ಕೂಟ
- 7ನೇ ವೇತನ ಆಯೋಗದಂತೆ ಸರಿ ಸಮಾನ ವೇತನ ಜಾರಿಗೆ ಒತ್ತಾಯ
- ಕಾರ್ಮಿಕ ಸಂಘಟನೆಗಳ ಮುಷ್ಕರದಲ್ಲಿ ನಾವು ಭಾಗಿಯಾಗುವುದಿಲ್ಲ
- ಸರ್ಕಾರ ಸರಿ ಸಮಾನ ವೇತನ ಮಾಡಲೇ ಬೇಕು
- ಇಲ್ಲ ಶೀಘ್ರದಲ್ಲೇ ಮುಷ್ಕರಕ್ಕೆ ನಾವು ಕರೆ ಕೊಡುತ್ತೇವೆ ಎಂದ ಅಧಿಕಾರಿಗಳು/ನೌಕರರ ಒಕ್ಕೂಟ
- ಸಾರಿಗೆ ಅಧಿಕಾರಿಗಳು -ನೌಕರರು ಒಟ್ಟಿಗೆ ಬೀದಿಗಿಳಿಯಲು ಸಿದ್ಧತೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ವೇತನ ಪರಿಷ್ಕರಣೆಯ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ 1-1-2020ರಿಂದ ನೌಕರರಿಗೆ ಸಂದಾಯವಾಗಬೇಕು. ಜತೆಗೆ 2024ರ ಜನವರಿ ಒಂದರಿಂದ 7ನೇ ವೇತನ ಆಯೋಗದಂತೆ ನಮಗೆ ವೇತನ ಜಾರಿಮಾಡಿ ಕೊಡಬೇಕು ಎಂದು ಸಾರಿಗೆ ಅಧಿಕಾರಿಗಳು/ನೌಕರರು ಆಗ್ರಹಿಸಿದ್ದಾರೆ.
2020ರ ಜನವರಿ 1ರಂದು ವಾಡಿಕೆಯಂತೆ ನಮ್ಮ ನಿಗಮಗಳಲ್ಲಿ 4 ವರ್ಷಗಳಿಗೊಮ್ಮೆ ನಡೆಯಬೇಕಾಗಿದ್ದ ವೇತನ ಪರಿಷ್ಕರಣೆಯು ಜಾರಿಗೊಳ್ಳಬೇಕಾಗಿದ್ದು, ಕೋವಿಡ್-19 ಮತ್ತಿತರ ಕಾರಣಗಳಿಂದಾಗಿ ನಿಗಮದ ಆಡಳಿತ ಮಂಡಳಿಯು ವಿಳಂಬ ಮಾಡಿ ಅಂತಿಮವಾಗಿ ಮಾರ್ಚ್ 2023ರಂದು ಶೇ.15ರಷ್ಟು ಹೆಚ್ಚುವರಿ ಮಾಡಿ ಆದೇಶ ನೀಡಿದೆ. ಇತ್ತೀಚೆಗೆ ನಿವೃತ್ತಿ ಹೊಂದುತ್ತಿರುವ ಎಲ್ಲ ನೌಕರರಿಗೂ ಪರಿಷ್ಕೃತ ವೇತನ ನಿಗದಿಪಡಿಸಿ ಅದರಂತೆ ಗ್ರಾಚ್ಯುಟಿ ಮತ್ತು ಇನ್ನಿತರೆ ಆರ್ಥಿಕ ಸೌಲಭ್ಯವನ್ನು ಸಹ ನೀಡಿದ್ದಾರೆ.
ವಾಸ್ತವಾವಗಿ 1-1-2020ರಲ್ಲಿ ಸೇವೆಯಲ್ಲಿದ್ದ ಎಲ್ಲ ನೌಕರರಿಗೂ ಇದರ ಲಾಭ ಸಲ್ಲಬೇಕಾಗಿದ್ದು, ಅದನ್ನು ಕೂಡಲೇ ಬಿಡುಗಡೆ ಮಾಡಿ. ಜತೆಗೆ ನಮಗೆ ಈ 4 ವರ್ಷಕ್ಕೊಮ್ಮೆ ಆಗುತ್ತಿರುವ ಅಗ್ರಿಮೆಂಟ್ ನಿಲ್ಲಿಸಿ ವೇತನ ಆಯೋಗವನ್ನು ಅಳವಡಿಸಿ ಅದರಂತೆ ವೇತನ ಪರಿಷ್ಕರಣೆ ಮಾಡಿ ಎಂದು ಸರ್ಕಾರಕ್ಕೆ ಸಾರಿಗೆ ಅಧಿಕಾರಿಗಳು- ನೌಕರರು ಒತ್ತಾಯಿಸಿದ್ದಾರೆ.
ಇನ್ನು ಶೇ.100ಕ್ಕೆ 100ರಷ್ಟು ಸಾರಿಗೆ ಅಧಿಕಾರಿಗಳು ಹಾಗೂ ಶೇ.100ಕ್ಕೆ 96ರಷ್ಟು ನೌಕರರು ಅಗ್ರಿಮೆಂಟ್ ಬೇಡ ಸರಿ ಸಮಾನ ವೇತನ ಬೇಕು ಎಂದು ಪಟ್ಟುಹಿಡಿದ್ದಿದಾರೆ. ಹೀಗಾಗಿ ಅಧಿಕಾರಿಗಳಾಗಲಿ, ನೌಕರರಾಗಲಿ ಇದೇ 31ರಿಂದ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಎಂದು ಹೇಳುತ್ತಿದ್ದಾರೆ.
ಇನ್ನು ನಮಗೆ ಸಿಗಬೇಕಿರುವ ವೇತನ ಮತ್ತಿತರ ಸೌಲಭ್ಯಗಳನ್ನು ಕೂಡಲೇ ಕೊಡಬೇಕು ಇಲ್ಲದಿದ್ದರೆ ನಾವು ಅತೀ ಶೀಘ್ರದಲ್ಲೇ ಮುಷ್ಕರಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಅಧಿಕಾರಿಗಳು ಹಾಗೂ ನೌಕರರ ಒಕ್ಕೂಟ ಎಚ್ಚರಿಕೆ ನೀಡಿದೆ.
ಅಲ್ಲದೆ ಸಾರಿಗೆ ಅಧಿಕಾರಿಗಳು ಹಾಗೂ ನೌಕರರಲ್ಲಿ ವೇತನ ಹೆಚ್ಚಳ ಸಂಬಂಧ ಯಾವುದೇ ತಕರಾರಿಲ್ಲ. ಆದರೆ ಅಗ್ರಿಮೆಂಟ್‌ಗೆ ಮಾತ್ರ ಅಧಿಕಾರಿಗಳು/ನೌಕರರು ಒಪ್ಪುವುದಿಲ್ಲ. ಹೀಗಾಗಿ ನಮಗೆ ಕಾರ್ಮಿಕ ಸಂಘಟನೆಗಳ ಅವಶ್ಯಕತೆ ಇಲ್ಲ. ನಮ್ಮ ಸಾರಿಗೆ ಅಧಿಕಾರಿಗಳು/ನೌಕರರೇ ಸೇರಿ ಕಟ್ಟಿಕೊಂಡಿರುವ ಸಂಘಟನೆಗಳ ಮುಖಂಡರನ್ನು ಕರೆದು ವೇತನ ಹೆಚ್ಚಳ ಸಂಬಂಧ ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನೌಕರರ ಸಂಘಟನೆಗಳು ಒತ್ತಾಯಿಸಿವೆ.
ಇನ್ನು ಸಾರಿಗೆ ನೌಕರರನ್ನು ಕಾರ್ಮಿಕ ಕಾಯಿದೆಯಡಿ ತಂದು ಅವರನ್ನು ಹೊರಗುತ್ತಿಗೆ ನೌಕರರಂತೆ ಮಾಡಿಬಿಟ್ಟಿದ್ದಾರೆ ಕಾರ್ಮಿಕ ಸಂಘಟನೆಗಳ ಮುಖಂಡರು. ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಕಾರಣ ಕಳೆದ 1996ರಿಂದ ಇಲ್ಲಿಯವರೆಗೂ ಅವರಿಂದ ಸಾರಿಗೆ ನೌಕರರಿಗೆ ಗುಲಗಂಜಿಯಷ್ಟು ಪ್ರಯೋಜವಾಗಿಲ್ಲ. ಬದಲಿಗೆ ಬೆಟ್ಟದಷ್ಟು ಸಮಸ್ಯೆ ಆಗಿದೆ. ಹೀಗಾಗಿ ನಮಗೆ ಈ ವೇತನ ಅಗ್ರಿಮೆಂಟ್ ಬೇಡ ನಮಗೆ ಬೇಕಿರುವುದು 7ನೇ ವೇತನ ಆಯೋಗ ಮಾತ್ರ ಎಂದು ಹೇಳಿದ್ದಾರೆ.
ಇನ್ನು ಅಧಿಕಾರಿಗಳು/ನೌಕರರ ಬೇಡಿಕೆ ಈಡೇರಿಸುವುದಕ್ಕೆ ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿ ಮುಂದಾಗದಿದ್ದರೆ ನಾವು ಅತೀಶೀಘ್ರದಲ್ಲೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಅದೂ ಕೂಡ ಸರ್ಕಾರಿ ನೌಕರರ ಮಾದರಿಯಲ್ಲಿ ಹೋರಾಟ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು/ನೌಕರರ ಸಂಘಟನೆಗಳ ಒಕ್ಕೂಟ ಸೂಕ್ಷ್ಮವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.