ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು/ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ 2025ರ ಜನವರಿ 6ರಿಂದ ಜಾರಿಗೆ ಬರಲಿದೆ ಎಂದು ಸಂಸ್ಥೆಯ ನಿರ್ದೇಶಕರು (ಸಿ&ಜಾ) ತಿಳಿಸಿದ್ದಾರೆ.
ಈ ಸಂಬಂಧ ಇಂದು (ಡಿ.30) ಆದೇಶ ಹೊರಡಿಸಿರುವ ನಿರ್ದೇಶಕರು ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನ “KSRTC Arogya” ಯೋಜನೆಗೆ ನೌಕರರ ವಂತಿಕೆಯನ್ನು 2024ರ ಡಿಸೆಂಬರ್ ತಿಂಗಳಿಂದಲೇ ಪ್ರತಿ ತಿಂಗಳು 650 ರೂ.ಗಳನ್ನು ಕಡಿತಗೊಳಿಸಬೇಕು ಎಂದು ಹೇಳಿದ್ದಾರೆ.
ನಿಗಮದಲ್ಲಿ ಹಾಲಿ ಇರುವ ವೈದ್ಯಕೀಯ ವೆಚ್ಚ ಮರುಪಾವತಿ ವ್ಯವಸ್ಥೆಯ ಜತೆಗೆ ನೌಕರರಿಂದ ಪ್ರತಿ ತಿಂಗಳು 650 ರೂ.ಗಳ ವಂತಿಕೆ ಪಡೆದು (Contributory Scheme) ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯನ್ನು 06.01.2025 ರಿಂದ ಜಾರಿಗೊಳಿಸಲಾಗುತ್ತಿದೆ.
ಹೀಗಾಗಿ ಈ ಯೋಜನೆಗೆ ನಿಗಮದ ನೌಕರರಿಂದ ಮಾಸಿಕ ವಂತಿಕೆ ಪ್ರತಿ ತಿಂಗಳು 650 ರೂ.ಗಳನ್ನು ಪಡೆದು ಜಾರಿಗೊಳಿಸಲು ನಿಗಮದ ನೋಂದಾಯಿತ ಕಾರ್ಮಿಕ ಸಂಘಟನೆಗಳು ಲಿಖಿತವಾಗಿ ಒಪ್ಪಿಗೆ ಪತ್ರವನ್ನು ನೀಡಿವೆ ಎಂದು ತಿಳಿಸಿದ್ದಾರೆ.
ಇನ್ನು ಈ ಯೋಜನೆಯೂ ತರಬೇತಿ ನೌಕರರು, ನ್ಯಾಯಾಲಯದ ಆದೇಶದ ಮೇರೆಗೆ 17/ಬಿ ರಡಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ ಸರ್ಕಾರದ ಇತರೇ ಇಲಾಖೆಗಳು, ಇತರೇ ಸಾರಿಗೆ/ ನಿಗಮಗಳಿಂದ ಎರವಲು ಸೇವೆಯ ಮೇಲೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಸಿಗುವುದಿಲ್ಲ.
ಹೀಗಾಗಿ ಇವರನ್ನು ಹೊರತು ಪಡಿಸಿ, ಉಳಿದ ಎಲ್ಲ ನೌಕರರಿಂದ ಡಿಸೆಂಬರ್-2024ರ ವೇತನದಿಂದ ಮುಂದುವರಿದಂತೆ ಮಾಸಿಕ 650 ರೂ.ಗಳನ್ನು ಪ್ರತಿ ತಿಂಗಳು ಕಡಿತಗೊಳಿಸಲು ಸೂಕ್ತಾಧಿಕಾರಿಗಳು ಮಂಜೂರಾತಿ ನೀಡಿದ್ದಾರೆ. ಅದರಂತೆ ಅಗತ್ಯ ಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ತಿಳಿಸಿದ್ದಾರೆ.
ಇನ್ನು ಯೋಜನೆಗಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸುತೋಲೆಯನ್ನು ಹೊರಡಿಸಲಾಗುವುದು ಎಂದಿರುವ ನಿರ್ದೇಶಕರು, ಈ ಸಂಬಂಧ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು ಕೇಂದ್ರ ಕಚೇರಿ, ಕರಾರಸಾ ನಿಗಮ ಹಾಗೂ ಎಲ್ಲ ಹಿರಿಯ/ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ಕಾರ್ಯ ನಿರ್ವಾಹಕ ಅಭಿಯಂತರರಿಗೂ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.