ಬನ್ನೂರು: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಬನ್ನೂರು ಗ್ರಾಮಾಂತರ ಘಟಕದ ಮುಖಂಡರು ಬನ್ನೂರು ಸಂತೆಮಾಳದ ಬಸವೇಶ್ವರ ವೃತ್ತದಲ್ಲಿ ಶನಿವಾರ ರಾತ್ರಿ ಮೇಣದ ಬೆಳಗಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ದೇಶದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, 60 ವರ್ಷ ತುಂಬಿದ ರೈತರಿಗೆ ತಿಂಗಳಿಗೆ 10 ಸಾವಿರ ಪಿಂಚಣಿ ಕೊಡಬೇಕು ಎಂಬಿತ್ಯಾದಿ ರೈತಪರ ಸಮಸ್ಯೆಗಳ ಬಗೆಹರಿಸುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದರು.
ಇನ್ನು ಅವರ ಹೋರಾಟಕ್ಕೆ ನಾವು ಅಂದರೆ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಹೋರಾಟಕ್ಕೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಬನ್ನೂರು ಗ್ರಾಮಾಂತರ ಘಟಕದ ಮುಖಂಡರು ಪ್ರತಿಭಟನೆ ನಡೆಸುವ ಮೂಲಕ ಬೆಂಬಲಿಸುತ್ತಿದ್ದೇವೆ ಎಂದು ತಿಳಿಸಿದರು.
ಎಂಎಸ್‌ಪಿ ಕಾನೂನು ಜಾರಿಗೆ ಒತ್ತಾಯಿಸಿ ಪಂಜಾಬ್- ಹರಿಯಾಣ ಕನೂರಿ ಬಾರ್ಡರ್ ನಲ್ಲಿ ಕಳೆದ 33 ದಿನಗಳಿಂದ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರ ಸಂಘಟನೆಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಹೋರಾಟವನ್ನು ಬೆಂಬಲಿಸಲು ದೇಶದ ಪ್ರತಿಯೊಬ್ಬ ರೈತರು ಪಣತೊಟ್ಟಿದ್ದಾರೆ ಎಂದು ಹೇಳಿದರು.
ದೇಶಾದ್ಯಂತ ಮೇಣದ ಬತ್ತಿ ಬೆಳಗಿಸಿ ಹೋರಾಟ ನಡೆಸಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ವಿವಿಧ ರಾಜ್ಯದ ರೈತ ಮುಖಂಡರಿಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಆರೋಗ್ಯ ಸುಧಾರಿಸಲಿ ಹಾಗೂ ರೈತ ಪರವಾಗಿ ಹಮ್ಮಿಕೊಂಡಿರುವ ಅವರ ಹೋರಾಟಕ್ಕೆ ಜಯವಾಗಲಿ ಎಂದು ಪ್ರಾರ್ಥಿಸಿ ಮೇಣದ ಬತ್ತಿ ಬೆಳಗಿಸಲಾಗಿದೆ ಎಂದರು.
ರೈತರ ನೋವು ನಮ್ಮನಾಳುವ ಸರ್ಕಾರಗಳಿಗೆ ಏಕೆ ತಿಳಿಯುತ್ತಿಲ್ಲ ಎಂಬುದೆ ಅನುಮಾನ ಮೂಡುತ್ತಿದೆ. ವರ್ಷದ ಅಂತ್ಯದಲ್ಲಾದರೂ ಪ್ರಧಾನಿ ನರೇಂದ್ರ ಮೋದಿಯವರು ರೈತರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು, ತಪ್ಪಿದರೆ ರಾಜ್ಯಾದ್ಯಂತ ವಿಭಿನ್ನ ರೀತಿಯ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಿ.ನರಸೀಪುರ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ತಾಲೂಕು ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ಮುಖಂಡರಾದ ಅತ್ತಹಳ್ಳಿ ಸಿ.ಲಿಂಗಣ್ಣ, ಅರುಣ್ ಕುಮಾರ್, ಬನ್ನೂರು ಸೂರಿ, ನಂಜೇಗೌಡ, ಮೆಡಿಕಲ್ ಮಹೇಶ್, ನಂದಿ ಸ್ಟೋರ್ ನಟೇಶ್, ಹನುಮನಾಳು ಲೋಕೇಶ್ ರಾಮ, ಎ.ಪಿ. ನವೀನ್, ಶಿವರಾಜ್, ವಿನಯ್, ಚೇತನ್, ಮಹೇಶ್, ವರದರಾಜ್, ರಮೇಶ, ಕಾಳಪ್ಪ, ಹೊನ್ನಯ್ಯ, ರಾಚಾಚಾರಿ, ಕುಂತನಹಳ್ಳಿ ಕುಳ್ಳೆಗೌಡ ಹಾಗೂ ಬನ್ನೂರು ಸುತ್ತಮುತ್ತಲ ಗ್ರಾಮಗಳ ರೈತರು ಭಾಗವಹಿಸಿದ್ದರು.