ನಟ ಕಿಚ್ಚ ಸುದೀಪ್ಗೆ ಅನಾಮಧೇಯ ಬೆದರಿಕೆ ಪತ್ರ : ಆತ ಯಾರು ಅಂತ ಗೊತ್ತು ಎಂದ ಸುದೀಪ್
ಬೆಂಗಳೂರು: ಅನಾಮಧೇಯ ವ್ಯಕ್ತಿಯಿಂದ ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ ಬಂದಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆದರೆ, ಈ ಮಧ್ಯೆಯೇ ಈ ಕುರಿತು ಪ್ರತಿಕ್ರಿಯಿಸಿರುವ ನಟ ಕಿಚ್ಚ ಸುದೀಪ್, ಬೆದರಿಕೆ ಪತ್ರ ಬರೆದವರಿಗೆ ಅವರ ಮಾರ್ಗದಲ್ಲೇ ಉತ್ತರ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಪತ್ರ ಬರೆದ ವ್ಯಕ್ತಿಯೂ ಯಾರೆಂದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಇಂತಹ ಬೆದರಿಕೆಗಳಿಗೆಲ್ಲ ನಾಣು ಹೆದರಲ್ಲ. ಪತ್ರ ಬರೆದವರು ಯಾರೆಂದು ಸಹ ನನಗೆ ಗೊತ್ತಿದೆ. ಆದರೆ, ಅವರ ಬಗ್ಗೆ ನಾನು ಮಾತನಾಡಲ್ಲ. ಚಿತ್ರರಂಗದಲ್ಲಿ ನನ್ನ ಕಂಡರೆ ಆಗದವರು ಇದ್ದಾರೆ. ಅಂಥವರಿಗೆ ಅವರ ಮಾರ್ಗದಲ್ಲೇ ಉತ್ತರ ಕೊಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಈ ಪ್ರಕರಣ ಕುರಿತು ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಕೃಷ್ಣಕಾಂತ್ ಮಾತನಾಡಿ, ನಟ ಸುದೀಪ್ ಅವರಿಗೆ ಬೆದರಿಕೆ ಪತ್ರ ಬಂದಿದೆ ಎಂದು ಮಂಜು ಎಂಬುವವರು ದೂರು ನೀಡಿದ್ದಾರೆ. ಹೀಗಾಗಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕ್ಕಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.