ಪತ್ನಿ ಕೊಲೆಗೈದು ನಾಪತ್ತೆಯಾಗಿದ್ದಾಳೆ ಎಂದು ಕತೆ ಕಟ್ಟಿ ದೂರು ದಾಖಲಿಸಿದ್ದ ಪತಿಯೇ ಕೊಲೆಗಾರ
![](https://vijayapatha.in/wp-content/uploads/2023/11/3-Nov-Shanthavasu.jpg)
ಹಾಸನ: ಪತ್ನಿಯನ್ನು ಕೊಲೆಗೈದು ನಾಪತ್ತೆಯಾಗಿದ್ದಾಳೆ ಎಂದು ಕತೆ ಕಟ್ಟಿ ದೂರು ದಾಖಲಿಸಿದ್ದ ಪತಿಯ ನಾಟಕ ಬಯಲಾದ ಘಟನೆ ಸಕಲೇಶಪುರದ ಬಾಗೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಎರಡೂವರೆ ತಿಂಗಳ ಹಿಂದೆ ಏಕಾಏಕಿ ಶಾಂತಿವಾಸು (29) ಎಂಬ ಮಹಿಳೆ ನಾಪತ್ತೆಯಾಗಿದ್ದು, ಈಗ ಮನೆಯ ಪಕ್ಕದ ಗುಂಡಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ನಾಯಿಗಳು ಆಕೆಯ ಮೂಳೆಗಳನ್ನು ಮಣ್ಣಿನಿಂದ ತೆಗೆದು ಎಳದಾಡಿದ ಮೇಲೆ ಕೊಲೆ ಪ್ರಕರಣ ಬಯಲಾಗಿದೆ.
ಹತ್ಯೆ ಆರೋಪಿ ಬೇರೆ ಯಾರು ಅಲ್ಲ ನಾಪತ್ತೆ ದೂರು ನೀಡಿದ ಆಕೆಯ ಪತಿ ಪವನ್ ಕುಮಾರನೇ ಎಂಬುವುದು ಸದ್ಯ ಬಯಲಾದ ಸತ್ಯವಾಗಿದೆ.
ಪವನ್ ಕುಮಾರ್ ಹಾಗೂ ಶಾಂತಿವಾಸು ಇಬ್ಬರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಬಳಿಕ ಇಬ್ಬರ ನಡುವೆ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಗುತ್ತಿತ್ತು. ಆ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಆ ವೇಳೆ ಪತ್ನಿ ಮೃತಪಟ್ಟಿದ್ದಾಳೆ. ಬಳಿಕ ಆಕೆಯನ್ನು ಮನೆಯ ಪಕ್ಕದಲ್ಲಿ ಗುಂಡಿ ತೋಡಿ ಹೂತುಹಾಕಿದ್ದಾನೆ. ಅಲ್ಲದೇ ಬಳಿಕ ಮನೆ ತೊರೆದು ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿದ್ದನು ಎಂದು ತಿಳಿದು ಬಂದಿದೆ.
ಇನ್ನು ಬೀದಿ ನಾಯಿಗಳು ಶಾಂತಿವಾಸು ಅವರ ಮೃತದೇಹದ ತುಂಡುಗಳನ್ನು ಎಳೆದಾಡಿದ್ದರಿಂದ ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಕಲೇಶಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)