ಪ್ಯಾರಾಲಿಂಪಿಕ್: ಏರ್ ರೈಫಲ್ ಶೂಟಿಂಗ್ನಲ್ಲಿ ಭಾರತಕ್ಕೆ ಸ್ವರ್ಣ ತಂದ ಅವನಿ ಲೆಖಾರಾ
ಟೋಕಿಯೋ: ಈ ಬಾರಿಯ ಪ್ಯಾರಲಿಂಪಿಕ್ ನಲ್ಲಿ ಸಹ ಭಾರತ ಇತಿಹಾಸ ಸೃಷ್ಟಿಸಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಅವನಿ ಲೆಖಾರಾ ಅವರು ಮಹಿಳೆಯರ 10 ಮೀಟರ್ ಏರ್ ರೈಫಲ್ ಶೂಟಿಂಗ್ನಲ್ಲಿ ಸ್ವರ್ಣ ಪದಕ ಗಳಿಸಿದ್ದಾರೆ. ಈ ಮೂಲಕ ಭಾರತಕ್ಕೆ ಪ್ಯಾರಾಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ ಮೊದಲ ಮಹಿಳೆಯಾಗಿದ್ದಾರೆ.
ಪ್ಯಾರಲಿಂಪಿಕ್ ನಲ್ಲಿ ಇದುವರೆಗೆ ಚಿನ್ನ ಗೆದ್ದ ಭಾರತೀಯ ಆಟಗಾರರಲ್ಲಿ ಅವನಿ ಲೆಖಾರಾ ನಾಲ್ಕನೆಯವರಾಗಿದ್ದಾರೆ. 19 ವರ್ಷದ ಅವನಿ ಒಟ್ಟು 249.6 ಅಂಕಗಳನ್ನು ಗಳಿಸುವ ಮೂಲಕ ಪ್ಯಾರಲಿಂಪಿಕ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.
ಈ ಹಿಂದಿನ ಪ್ಯಾರಲಿಂಪಿಕ್ ನಲ್ಲಿ ಭಾರತದ ಕ್ರೀಡಾಪಟುಗಳಾದ ಈಜುಗಾರ ಮುರಳಿಕಾಂತ್ ಪೆಟ್ಕರ್(1972ರಲ್ಲಿ), ಜಾವೆಲಿನ್ ಥ್ರೋವರ್ ದೇವೇಂದ್ರ ಜಾಜರಿಯಾ(2004 ಮತ್ತು 2016ರಲ್ಲಿ) ಮತ್ತು ಹೈಜಂಪ್ ನಲ್ಲಿ 2016ರಲ್ಲಿ ತಂಗವೇಲು ಮರಿಯಪ್ಪನ್ ಚಿನ್ನದ ಪದಕ ಗಳಿಸಿದ್ದರು.
ಎಸ್ ಎಚ್ 1 ರೈಫಲ್ ವಿಭಾಗದಲ್ಲಿ ಅವನಿ ಲೆಖಾರಾ ಗನ್ ನ್ನು ಕೈಗಳಿಂದ ಬಂದೂಕನ್ನು ಹಿಡಿದುಕೊಳ್ಳಲು ಸಮರ್ಥರಾಗಿದ್ದರು. ಪ್ಯಾರಲಿಂಪಿಕ್ ನಲ್ಲಿ ಕ್ರೀಡಾಪಟುಗಳು ತಮ್ಮ ಕಾಲುಗಳಲ್ಲಿ ದುರ್ಬಲತೆ ಹೊಂದಿರುವವರು ಕುಳಿತುಕೊಂಡು ಸಾಧ್ಯವಾದವರು ನಿಂತುಕೊಂಡು ಸ್ಪರ್ಧಿಸುತ್ತಾರೆ.
ಪ್ರಧಾನಿ ಪ್ರಶಂಸೆ: ಇವರ ಅದ್ವಿತೀಯ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಅವನಿ ಲೆಖಾರಾ ಅಸಾಧಾರಣ ಪ್ರದರ್ಶನ ತೋರಿದ್ದೀರಿ. ನಿಮ್ಮ ಶ್ರಮದಿಂದ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದೀರಿ.
ಶೂಟಿಂಗ್ ಬಗೆಗೆ ನಿಮಗಿರುವ ಉತ್ಸಾಹದಿಂದ ಇದು ಸಾಧ್ಯವಾಗಿದೆ. ಭಾರತೀಯ ಕ್ರೀಡೆಗಳಿಗೆ ಇದು ನಿಜಕ್ಕೂ ವಿಶೇಷ ಕ್ಷಣ, ಮುಂದಿನ ನಿಮ್ಮ ಪ್ರಯತ್ನಗಳಿಗೆ ಶುಭ ಹಾರೈಕೆ ಎಂದು ಹೇಳಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)