ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಮೇಲುಸೇತುವೆ ಹಾಗೂ ಕೆಳಸೇತುವೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕೆಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವೀಡಿಯೋ ಸಂವಾದದ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಪಾಲಿಕೆ ಒಡೆತನದಲ್ಲಿರುವ ಎಲ್ಲಾ ಮೇಲುಸೇತುವೆ ಹಾಗೂ ಕೆಳಸೇತುವೆಗಳನ್ನು ಪರಿಶೀಲನೆ ನಡೆಸಿ ಸರಿಯಾಗಿ ನಿರ್ವಹಣೆ ಮಾಡಬೇಕೆಂದು ತಿಳಿಸಿದರು.
ಸ್ಕೈವಾಕ್ ಗಳ ನಿರ್ವಹಣೆ ಮಾಡಿ: ನಗರದಲ್ಲಿರುವ ಸ್ಕೈವಾಕ್(ಪಾದಚಾರಿ ಮೇಲುಸೇತುವೆ)ಗಳಲ್ಲಿ ಬರುವ ಲಿಫ್ಟ್ ಗಳನ್ನು ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಜೊತೆಗೆ ಎಲ್ಲಾ ಸ್ಕೈವಾಕ್‌ಗಳ ಬಳಿ ಸ್ವಚ್ಛತೆ ಕಾಪಾಡಬೇಕು. ಪಾದಚಾರಿಗಳ ಓಡಾಟಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಬಾಕಿ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ: ಪಾಲಿಕೆ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ನಿರಂತರವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು, ಆಯಾ ವಲಯಗಳಲ್ಲಿ ಇಂಜಿನಿಯರ್‌ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಬಾಕಿಯಿರುವ ರಸ್ತೆಗುಂಡಿಗಳನ್ನು ಕೂಡಾ ತ್ವರಿತವಾಗಿ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ತಿ ತೆರಿಗೆ ಸಂಗ್ರಹ: ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಆಸ್ತಿ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹಿಸಬೇಕು. ನವೆಂಬರ್ ತಿಂಗಳಾಂತ್ಯದವರೆಗೆ ಒಂದು ಬಾರಿ ಪರಿಹಾರ ಯೋಜನೆಯನ್ನು ವಿಸ್ತಿರಿಸಿದ್ದು, ಬಾಕಿ ಆಸ್ತಿ ತೆರಿಗೆ ಪಾವತಿಸಬೇಕಿರುವವರಿಂದ ಕೂಡಲೆ ಬಾಕಿ ಆಸ್ತಿ ತೆರಿಗೆಯನ್ನು ಪಾವಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲು ವಿಶೇಷ ಆಯುಕ್ತರಿಗೆ ತಿಳಿಸಿದರು.
ಕಸದ ಸಮಸ್ಯೆ ಬಗೆಹರಿಸಿ: ನಗರದಲ್ಲಿ ರಸ್ತೆ ಬದಿ, ಪಾದಾಚರಿ ಮಾರ್ಗ, ಖಾಲಿ ಸ್ಥಳ/ಜಾಗಗಳಲ್ಲಿ ಕಸ ಸುರಿಯುವ ಸ್ಥಳ(ಬ್ಲಾಕ್ ಸ್ಪಾಟ್ಸ್)ಗಳನ್ನು ಪಟ್ಟಿ ಮಾಡಿ ಅವುಗಳನ್ನು ಕೂಡಲೆ ಸ್ವಚ್ಛ ಮಾಡಿ ಮತ್ತೆ ಬ್ಲಾಕ್ಸ್ ಸ್ಪಾಟ್ಸ್ ಗಳಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿ ಕಸ ಸುರಿಯುವುದರಿಂದ ನಗರ ಸೌಂದರ್ಯ ಹಾಳಾಗಲಿದ್ದು, ಈ ಬಗ್ಗೆ ಆಯಾ ವಲಯ ವ್ಯಾಪ್ತಿಯಲ್ಲಿ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ನಾಗರೀಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.
ಬೀದಿ ದಿಪಗಳ ನಿರ್ವಹಣೆ ಸರಿಯಾಗಿ ಮಾಡಿ: ನಗರದಲ್ಲಿ ಬೀದಿ ದೀಪಗಳ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು. ನಗರ ಪ್ರಮುಖ ರಸ್ತೆ ಗಳಿ, ಮೇಲುಸೇತುವೆಗಳಲ್ಲಿ ಬೀದಿ ದೀಪಗಳ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕೆಂದು ಸೂಚಿಸಿದರು.
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಎಲ್ಲ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಪ್ರಧಾನ ಅಭಿಯಂತರರು, ಮುಖ್ಯ ಅಭಿಯಂರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)