ಮೈಸೂರು: ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕೆಂದು ಪಂಜಾಬ್ ಹರಿಯಾಣ ಕನೋರಿ ಬಾರ್ಡರ್ನಲ್ಲಿ 29 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೆವಾಲ ಹೋರಾಟವನ್ನು ಬೆಂಬಲಿಸಿ ಬುಧವಾರ ಮೈಸೂರಿನ ನ್ಯಾಯಾಲಯದ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ರೈತರು ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸಿದರು.
ದೇಶಾದ್ಯಂತ ಮೇಣದಬತ್ತಿ ಉರಿಸಿ ಪ್ರತಿಭಟನೆ ನಡೆಸಬೇಕೆಂದು ರೈತರಿಗೆ ಕರೆ ನೀಡಲಾಗಿತ್ತು. ಬೇಕೇ ಬೇಕು ನ್ಯಾಯ ಬೇಕು. ರೈತರ ಹೋರಾಟಕ್ಕೆ ಜಯವಾಗಲಿ. ದಲೆವಾಲಾ ಪ್ರಾಣ ಉಳಿಸಬೇಕು ಎಂದು ಘೋಷಣೆ ಕೂಗಿದರು.
ಈ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ದಕ್ಷಿಣ ಭಾರತ ಸಂಚಾಲಕ ಕುರುಬೂರ್ ಶಾಂತಕುಮಾರ್ ಮಾತನಾಡಿ, ನಿನ್ನೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಸರ್ಕಾರದ ಪರ ವಕೀಲರಿಗೆ ಎಚ್ಚರಿಕೆ ನೀಡಿ ದಲೈವಾಲಾ ಅವರನ್ನು ಕೂಡಲೇ ಆಸ್ಪತ್ರೆಗೆ ವರ್ಗಾಯಿಸಬೇಕು ತುರ್ತು ಹೆಚ್ಚಿನ ಚಿಕಿತ್ಸೆ ನೀಡಬೇಕು ಎಂದು ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ಕಠಿಣ ಸೂಚನೆ ನೀಡಿದ್ದಾರೆ ಎಂದರು.
ಇನ್ನು ರೈತರಿಂದ ಆಯ್ಕೆಯಾದ ಜನಪ್ರತಿನಿಧಿ ಸರ್ಕಾರಕೆ ಈ ರೈತರ ನೋವು ಯಾಕೆ ಅರ್ಥವಾಗುತ್ತಿಲ್ಲ ಎಂಬುದೇ ಅನುಮಾನ ಮೂಡಿಸುತ್ತಿದೆ. ಇಂದು ಕ್ರಿಸ್ಮಸ್ ದಿನ ಯೇಸುವಾದರೂ ನಮ್ಮ ಪ್ರಧಾನಿಗೆ ಒಳ್ಳೆಯ ಬುದ್ಧಿ ನೀಡಿ ರೈತರ ಸಮಸ್ಯೆ ಬಗೆಹರಿಸುವಂತಾಗಲಿ ಎಂದು ಪ್ರಾರ್ಥಿಸಿದರು.
ಹಳ್ಳಿ ಹಳ್ಳಿಗಳಲ್ಲಿ ರೈತರು ಇನ್ನು ಎರಡು ದಿನಗಳು ಮನೆ, ಗ್ರಾಮ ಠಾಣಾ ಮುಂದೆ ಸಂಜೆ 7:ಗಂಟೆಗೆ ದೀಪ ಉರಿಸಿ ದಲೈವಾಲಾ ಹೋರಾಟ ಬೆಂಬಲಿಸಬೇಕು. ಸದ್ಯದಲ್ಲಿಯೇ ರಾಜ್ಯದ ರೈತರ ತಂಡ ದೆಹಲಿಗೆ ಹೋಗಿ ಹೋರಾಟವನ್ನು ಬೆಂಬಲಿಸಲಿದೆ ಎಂದರು.
ಈ ವೇಳೆ ನೀಲಕಂಠಪ್ಪ, ಪೈಲ್ವಾನ್ ವೆಂಕಟೇಶ, ಧರಣಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಟಪ್ಪ, ಕುರುಬೂರು ಪ್ರದೀಪ್, ಬನ್ನೂರು ಸೂರಿ, ತಾಲೂಕು ಅಧ್ಯಕ್ಷ ಲಕ್ಷ್ಮೀಪುರ ವೆಂಕಟೇಶ್,ವರಕೂಡು ನಾಗೇಶ್, ವಾಜಮಂಗಲ ಮಾದೇವ,ದೊಡ್ಡಕಾಟೂರ್ ಮಹದೇವಸ್ವಾಮಿ, ಚುಂಚರಾಯನಹುಂಡಿ, ಗಿರೀಶ್, ಮಹೇಶ್, ಕೆರಗಳ್ಳಿ ಸತೀಶ್, ನಾಗರಾಜ್ ಇನ್ನು ಮುಂತಾದವರು ಇದ್ದರು.