ಮೈಸೂರು: ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವ ಪ್ರಧಾನಿ, ಕೃಷಿ ಮಂತ್ರಿಗಳ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಬಂಧನ
ಮೈಸೂರು: ರೈತ ವಿರೋಧಿ ಕೇಂದ್ರ ಸರ್ಕಾರದ ವರ್ತನೆ ಖಂಡಿಸಿ ದಲೈವಾಲ ಹೋರಾಟವನ್ನು ಬೆಂಬಲಿಸಿ ಪ್ರಧಾನ ಮಂತ್ರಿ ಹಾಗೂ ಕೃಷಿ ಮಂತ್ರಿಗಳ ಪ್ರತಿಕೃತಿ ದಹನ ಮಾಡಲು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಪೊಲೀಸರು ರೈತರ ಬಳಿ ಇದ್ದ ಪ್ರತಿಕೃತಿ ಕಿತ್ತುಕೊಂಡು ಹೋಗಲು ಪ್ರಯತ್ನಿಸಿದರು. ಈ ವೇಳೆ ರೈತರು ಆಕ್ರೋಶ ವ್ಯಕ್ತಪಡಿಸಿ ಬೆಂಕಿ ಹಚ್ಚಿದರು. ತಕ್ಷಣವೇ ಪೊಲೀಸರು ತಳ್ಳಾಟ ಮಾಡಿ ಕಿತ್ತುಕೊಂಡು ಹೋದರು.
ಈ ವೇಳೆ ಕಿಡಿಕಾರಿದ ರೈತರು ದಲೈವಾಲ ದೇಶದ ರೈತರಿಗಾಗಿ ಪ್ರಾಣ ಕಳೆದುಕೊಳ್ಳಲು ಸಿದ್ಧ ಎಂದು 49ನೇ ದಿನಗಳಿಂದ ಸಹಸ್ರಾರು ರೈತರ ಸಮ್ಮುಖದಲ್ಲಿ ಉಪವಾಸ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿರುವುದು ಖಂಡನೀಯ. ರೈತ ವಿರೋಧಿ ಧೋರಣೆಗೆ ಧಿಕ್ಕಾರ ಎಂದು ಕೂಗಿದರು.
ಅಲ್ಲದೆ ಪೊಲೀಸರು ಪ್ರತಿಕೃತಿ ಕಿತ್ತೊಯ್ದ ಕಾರಣವೇನು? ಇದಕ್ಕೆ ಉತ್ತರಿಸಬೇಕು ಎಂದು ಮೈಸೂರು ನಗರದ ಗನ್‌ಹೌಸ್ ವೃತ್ತದ ಬಳಿ ರಸ್ತೆಯಲ್ಲಿ ನೂರಾರು ರೈತರು ಕುಳಿತಾಗ ಒಂದು ಗಂಟೆಗಳ ಕಾಲ ಒಬ್ಬೊಬ್ಬರನ್ನೇ ಬಂಧಿಸಿ ಬಸ್‌ಗೆ ಹತ್ತಿಸಿದರು. ಈ ವೇಳೆ ಆದ ತಳ್ಳಾಟ ನೂಕಾಟದಲ್ಲಿ ಕಾರ್ಯಕರ್ತ ಮಹದೇವಸ್ವಾಮಿ ಕಾಲು ಮುರಿದಿದೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರದೊಯ್ಯಲಾಗಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ರೈತ ಚಳವಳಿಯನ್ನು ದುರ್ಬಲಗೊಳಿಸಲು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಯಾರು ಸೊಪ್ಪು ಹಾಕ್ಕುತ್ತಿಲ್ಲ. ಚಳವಳಿಗಾರರ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಇದೇ ಚಳವಳಿಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಶುಭಕರಣಸಿಂಗ್ ಕುಟುಂಬಕ್ಕೆ ಸರ್ಕಾರ ಒಂದು ಕೂಟಿ ರೂ. ಪರಿಹಾರ ನೀಡಲು ಹೋಗಿತ್ತು. ಆದರೆ, ಅವರ ಕುಟುಂಬ ಪರಿಹಾರ ಬೇಡ ಎಂದು ತಿರಸ್ಕಾರ ಮಾಡಿ ರೈತರ ಸಮಸ್ಯೆ ಬಗೆಹರಿಸಿ ಎಂದು ಸರ್ಕಾರಕ್ಕೆ ಎಚ್ಚರಿಸಿದಾರೆ ಇದು ರೈತರ ಚಳವಳಿಯ ಬದ್ಧತೆಯನ್ನು ಎತ್ತಿ ತೋರಿಸಿದೆ ಎಂದು ಹೇಳಿದರು.
ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ದೇಶಾದ್ಯಂತ ಭಾಷಣ ಮಾಡಿ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ತಿಳಿಸಿ ಅಧಿಕಾರಕ್ಕೆ ಬಂದರು ಸಮಸ್ಯೆ ಬಗೆಹರಿಸಲಿಲ್ಲ. ಅಂದಿನ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಸಮಿತಿಯ ಅಧ್ಯಕ್ಷರಾಗಿ ರೈತರ ಉತ್ಪನ್ನಗಳಿಗೆ ಎಂಎಸ್ಪಿ ಖಾತ್ರಿ ಕಾನೂನು ಜಾರಿ ಆಗತ್ಯವಿದೆ ಎಂದು 2011ರಲ್ಲಿ ವರದಿ ಕೂಟ್ಟ ಮುಖ್ಯಮಂತ್ರಿನರೇಂದ್ರ ಮೋದಿ 14 ವರ್ಷ ಕಳೆದ ನಂತರ ಇಂದು ಪ್ರಧಾನಿಯಾಗಿ ಏಕೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸಂಸತ್ ನಲ್ಲಿ ರೈತರ ವಿಚಾರಗಳ ಕೃಷಿ ಸಮಸ್ಯೆಗಳ ಬಗ್ಗೆ ಚರ್ಚೆಯಾದಾಗ 31ಜನರ ಸಂಸದೀಯ ಮಂಡಲಿ ರಚನೆಯಾಗಿದೆ ಇದರಲ್ಲಿ ಬೇರೆ ಬೇರೆ ಪಕ್ಷದ ಸಂಸದರು ಹಾಗೂ 16 ಜನ ಬಿಜೆಪಿ ಸಂಸದರು ಇರುವ ಸಮಿತಿ ಇದಾಗಿದೆ. ಈ ಸಮಿತಿ ನವಂಬರ್ 18ರಂದು ವರದಿ ನೀಡಿ ಎಂಎಸ್ಪಿ ಖಾತ್ರಿ ಕಾನೂನು ಮಾಡುವುದು ಆವಶ್ಯಕ ಎಂದು ತಿಳಿಸಿದೆ.
ರೈತರ ಹೋರಾಟದ ಸಮಸ್ಯೆಗಳ ಬಗ್ಗೆ ಪರಿಹಾರ ಕ್ರಮ ಕೈಗೊಳ್ಳಲು ಸರ್ವೂಚ್ಚ ನ್ಯಾಯಲಯ ನೇಮಿಸಿದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಅಧ್ಯಕ್ಷತೆಯ ನವಾಬಸಿಂಗ್ ಸಮಿತಿ ಮಧ್ಯಂತರ ವರದಿಯನ್ನು ನವಂಬರ್ 22 ರಂದು ನೀಡಿದೆ. ರೈತರ ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ಖಾತ್ರಿ ವ್ಯವಸ್ಥೆ ಜಾರಿ ಮಾಡುವುದು ಅತ್ಯವಶ್ಯಕ ಎಂದು ಸಮಿತಿ ವರದಿ ನೀಡಿದ್ದರು ಸಹ ಕೇಂದ್ರ ಸರ್ಕಾರ ಏನು ಪ್ರತಿಕ್ರಿಯೆ ನೀಡುತ್ತಿಲ್ಲ, ಮಾತನಾಡುತ್ತಿಲ್ಲ ಇದರರ್ಥ ಏನು ಎಂದು ಕೇಳಿದರು.
ಕೃಷಿ ಕ್ಷೇತ್ರದ ಸಮಸ್ಯೆ ನಿವಾರಣೆಗಾಗಿ ದೇಶದಲ್ಲಿ ಒಬ್ಬ ಕೃಷಿ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದ್ದಾರೆ. ಅವರು ನಿದ್ರೆ ಮಾಡುತ್ತಿದ್ದಾರೆಯೇ ಎಂಬುದು ನಮ್ಮ ಪ್ರಶ್ನೆಯಾಗಿದೆ. ಇವರಿಗೆ ನೈತಿಕತೆ ಇದ್ದರೆ ಸ್ವಪ್ರತಿಷ್ಠೆ ಬಿಟ್ಟು. ಪಂಜಾಬ್ ಹರಿಯಾಣ ರಾಜ್ಯಗಳ ಮಂತ್ರಿಗಳ ಜತೆಯಲ್ಲಿ ಹೋಗಿ ಉಪವಾಸ ನಿರತ ದಲೈವಾಲ ಜೊತೆ ಮಾತುಕತೆ ನಡೆಸಿ ಉಪವಾಸ ಕೈಬಿಡುವಂತೆ ಮನವಿ ಮಾಡಿ ಪ್ರಾಣ ಅಪಾಯ ತಪ್ಪಿಸಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಇವರೇ ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.
ಇಲ್ಲಿ ಯಾಕೆ ನಮ್ಮನ್ನ ತಡೆಯಾಕಿ ಬಂಧಿಸಿದ್ದೀರಿ?: ಮೈಸೂರು ನಗರದಲ್ಲಿ ಪ್ರತಿಭಟನಾ ನಿರತ ನೂರಾರು ರೈತರನ್ನು ಬಂಧಿಸಿರುವುದಕ್ಕೆ ಅನ್ನದಾತರು ಕಿಡಿಕಾರುತ್ತಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಬೆಳಗಾವಿ, ಧಾರವಾಡ, ಗುಲ್ಬರ್ಗ, ರಾಯಚೂರು, ಶಿವಮೊಗ್ಗ ಇನ್ನಿತರ ಜಿಲ್ಲೆಗಳಲ್ಲಿ ಪ್ರತಿ ಕೃತಿ ದಹನ ಚಳವಳಿ ಮಾಡಿದ್ದಾರೆ, ಅಲ್ಲಿ ಪೊಲೀಸರು ತಡೆ ಮಾಡಿಲ್ಲ. ಇಲ್ಲಿ ಯಾಕೆ ನಮಗೆ ತಡೆ ಮಾಡಿ ಬಂಧಿಸಿದ್ದೀರಿ ಎಂದು ಪೊಲೀಸರನ್ನು ಕೇಳುತ್ತಿದ್ದಾರೆ.
ಈಗ ನಮ್ಮನ್ನು ಬಂಧಿಸಿರುವ ಕಾರಣ ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂದು ಹಠ ಮಾಡಿ ರೈತರು ಕುಳಿತಲ್ಲೇ ಕುಳಿತಿದ್ದಾರೆ. ಎಸಿಪಿ ರಮೇಶ್ ಬಂಧಿತ ರೈತರ ಬಳಿ ಬಂದು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು. ಅಲ್ಲದೆ ಆಗಿರುವ ಘಟನೆಯ ಬಗ್ಗೆ ಎಸಿಪಿ ಅವರು ವಿಷಾದ ವ್ಯಕ್ತಪಡಿಸಿ ಮುಂದೆ ಈ ರೀತಿಯಾದಂತೆ ನಡೆದುಕೊಳ್ಳುವ ಭರವಸೆ ನೀಡಿದ ನಂತರ ರೈತರು ಬಿಡುಗಡೆಗೆ ಒಪ್ಪಿದರು.