ಮೈಸೂರು: ಸಾಲದ ಸುಳಿಯಲ್ಲಿ ಸಿಲುಕಿ ಅದನ್ನು ತೀರಿಸಲಾಗದೆ ಮನಸ್ಸಿನಲ್ಲಿ ಭಾರಿ ನೋವು ಅನುಭವಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ವಿಭಾಗದ ನಿರ್ವಾಹಕರೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಪಡೆದ ಸಾಲದ ಹಣ ವಾಪಸ್ ಕೊಡುವಂತೆ ಸಹೋದ್ಯೋಗಿ ಒತ್ತಾಯಿಸುತ್ತಿದ್ದರು. ಇತ್ತ ಆ ಹಣವನ್ನು ವಾಪಸ್ಕೊಡಲು ಶಕ್ತನಾಗದೆ ಮನನೊಂದು ಮನೆ ತೊರೆದಿದ್ದ ಕೆಎಸ್ಆರ್ಟಿಸಿ ಮೈಸೂರು ನಗರ ಘಟಕದ ಬಸ್ ಕಂಡಕ್ಟರ್ ಶ್ರೀಕಾಂತ ಯಲ್ಲಪ್ಪ (38) ಮೃತದೇಹ 10 ದಿನಗಳ ನಂತರ ವರುಣ ನಾಲೆಯಲ್ಲಿ ಪತ್ತೆಯಾಗಿದೆ.
ಡಿ.8ರ ಭಾನುವಾರ ಬೆಳಗ್ಗೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ವರುಣ ನಾಲೆಯಲ್ಲಿ ಪತ್ತೆ ಯಾಗಿದ್ದು, ಸಹೋದ್ಯೋಗಿ ಗುರುರಾಜ ಉಪಾಸ ಹಾಗೂ ಆತನ ಸ್ನೇಹಿತ ಸುಭಾಷ್ ಎಂಬುವರು ಕೊಟ್ಟಿದ್ದ ಸಾಲದ ಹಣಕ್ಕೆ ಪೀಡಿಸುತ್ತಿದ್ದರು ಎನ್ನಲಾಗಿದ್ದು, ಇದರಿಂದ ಮನನೊಂದು 10 ದಿನಗಳ ಹಿಂದೆ ಯಲ್ಲಪ್ಪ ಮನೆ ತೊರೆದಿದ್ದರು.
ಈ ಸಂಬಂಧ ಮೊದಲು ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರಾದರೂ, ಇದು ಉದಯಗಿರಿ ಠಾಣಾ ವ್ಯಾಪ್ತಿಗೆ ಬರುತ್ತಿದ್ದರಿಂದ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶ್ರೀಕಾಂತ್ ಯಲ್ಲಪ್ಪ ಅವರು ಮಗನ ಚಿಕಿತ್ಸೆಗಾಗಿ ಸಹೋದ್ಯೋಗಿ ಗುರುರಾಜ ಉಪಾಸ ಬಳಿ 3 ಲಕ್ಷ ರೂ. ಸಾಲ ಪಡೆದಿದ್ದು, ಆ ಹಣವನ್ನು ವಾಪಸ್ ನೀಡುವಂತೆ ಹಾಗಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎನ್ನಲಾಗಿದೆ.
ಇದರಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬದವರು ದೂರು ನೀಡಿದ್ದಾರೆ. ಯಲ್ಲಪ್ಪ ಅವರ ಸಂಬಂಧಿಕರೊಬ್ಬರು ಮಧ್ಯ ಪ್ರವೇಶಿಸಿ, 2 ಲಕ್ಷ ರೂ.ಗಳನ್ನು ವಾಪಸ್ ಕೊಟ್ಟು ಉಳಿದ ಹಣಕ್ಕೆ ಕಾಲಾವಕಾಶ ಕೇಳಿದ್ದರೂ ಹೆಚ್ಚುವರಿಯಾಗಿ ಬಡ್ಡಿ ಸೇರಿಸಿ 5 ಲಕ್ಷ ರೂ.ಗಳಿಗೆ ಒತ್ತಾಯ ಮಾಡಿದ್ದರು ಎಂದು ಮನೆಯಿಂದ ಹೊರಡುವ ಮುಂಚೆ ಬರೆದಿಟ್ಟಿರುವ ತಮ್ಮ ಡೆತ್ ನೋಟ್ನಲ್ಲಿ ತಿಳಿಸಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಉದಯಗಿರಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
ಸರ್ಕಾರ ಹಾಗೂ ಸಾರಿಗೆ ಆಢಳಿತ ಮಂಡಳಿಗಳು ನೌಕರರಿಗೆ ಸರಿ ಸಮಾನ ವೇತನ ಕೊಟ್ಟಿದ್ದರೆ ಈ ರೀತಿ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲ ಎಂದು ನೊಂದ ನೌಕರರು ಹೇಳುತ್ತಿದ್ದಾರೆ.